

ಚನ್ನಗಿರಿ: ಆಧುನಿಕತೆ ಹೆಚ್ಚಾದಂತೆ ಜನರು ನಾಗರಿಕರಾಗುತ್ತಿದ್ದಾರೆ. 21ನೇ ಶತಮಾನದಲ್ಲಿ ಸಾಂಸ್ಕೃತಿಕ ಮತ್ತು ನೈತಿಕವಾಗಿ ಜನರು ನಾನು ಎನ್ನುವ ಅಹಂನಲ್ಲಿ ಬೆರತು ಬೆಂದು ಹೋಗಿದ್ದಾರೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ವಡ್ನಾಳ್ ಗ್ರಾಮದಲ್ಲಿ ಗುರುವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಮ್ಮಿಕೊಂಡಿದ್ದ ಮನೆ ಅಂಗಳದಲ್ಲಿ ಶ್ರಾವಣ ಬಂತು, ಅನುಭಾವ ತಂತು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಬಸವಾದಿ ಶಿವಶರಣರು ಒಳ್ಳೆಯ ಯೋಚನೆಗಳನ್ನು ಕಾರ್ಯಗತಗೊಳಿಸಲು ಕಾಯಕಕ್ಕೆ ಟೊಂಕಕಟ್ಟಿ ತನು, ಮನ, ಧನ ಅರ್ಪಿಸಿದವರು. ಸದಾಚಾರ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದರು. 21ನೇ ಶತಮಾನದಲ್ಲಿ ಬಹಿರಂಗದಲ್ಲಿ ಶುದ್ಧತೆ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಬಸವಣ್ಣ ಕೇವಲ 12ನೇ ಶತಮಾನದ ಶ್ರೇಷ್ಠನಲ್ಲ, ಸರ್ವಶ್ರೇಷ್ಠರು ಎಂದರು.
ಸಮಾಜ ಸೇವಾಕರ್ತೆ ಎಂ.ಜಿ. ಶಶಿಕಲಾ ಮೂರ್ತಿ ಮಾತನಾಡಿ, ಶರಣರ ಯುಗದಲ್ಲಿ ಶಿವಶರಣೆಯರು ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲ, ಅವರು ರಚಿಸಿದ ವಚನಗಳ ಕುರಿತು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನಗಳು ನಡೆಯುತ್ತಿವೆ. ಇದಕ್ಕೆ ಕಾರಣ ಮಹಿಳೆಯರಿಗೆ ಅನುಭವ ಮಂಟಪದಲ್ಲಿ ನೀಡಿದ ಸಾಕ್ಷರತೆ ಮತ್ತು ವಾಕ್ ಸ್ವಾತಂತ್ರ್ಯ ಎಂದರು.
ಶರಣರ ತತ್ವ, ಆದರ್ಶಗಳು ನಾವು ಅನುಸರಿಸಿದಾಗ ಸಮಾಜ ಸುಸ್ಥಿತಿಗೆ ಬರುತ್ತದೆ. ಮಾನವೀಯ ಮೌಲ್ಯಗಳು ಅರಳಿ ನಡೆ- ನುಡಿಗಳು ಒಂದಾಗಿ ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜಾನಪದ ಚಿಂತಕ ಹಿರೇಕೊಗಲೂರು ಶರಣಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಟಿ.ವಿ. ಮಂಜುಳಾ ರಾಜು, ತಾಲೂಕು ಘಟಕದ ಅಧ್ಯಕ್ಷ ಎಂ. ರಾಜಪ್ಪ, ಗುರುಬಸವರಾಜು, ಕಾಂಗ್ರೆಸ್ ಮುಖಂಡ ವಡ್ನಾಳ್ ಜಗದೀಶ್, ಹಾಸ್ಯ ಸಾಹಿತಿ ಜಗನ್ನಾಥ್, ಎಂ.ಜಿ.ಧನಂಜಯ್, ಎಂ.ಯು. ಚನ್ನಬಸಪ್ಪ, ಟಿ.ವಿ. ಚಂದ್ರಪ್ಪ, ಜಿ.ಎಸ್. ಶಿವಮೂರ್ತಿ ಇತರರಿದ್ದರು.