

ಚನ್ನಗಿರಿ: ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವನ್ನು ಶರಣರು ಕಾಯಕ ಎಂದು ಅರ್ಥೈಸಿರುವುದಾಗಿ ಶ್ರೀ ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದ ಮಂಜುಳಾ ಟಿ.ವಿ. ರಾಜು ಪಟೇಲ್ ಅವರ ಮನೆಯ ಅಂಗಳದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಮ್ಮಿಕೊಂಡಿದ್ದ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಸಂಸ್ಕಾರ, ವಿಚಾರವಂತ ಮನೆ ನಿರ್ಮಿಸಲು ಬಸವತತ್ವದ ಆದರ್ಶ ಪಾಲಿಸಬೇಕು. ಅವಿಭಕ್ತ ಕುಟುಂಬ ಸಾರ್ಥಕವಾಗಲು ಶರಣರಾದ ಮಾಳಿಗೆ ಮನೆ, ಬಸವನಂಥ ಮಗ, ನೀಲಮ್ಮಳಂಥ ಸೊಸೆ ಇರಬೇಕು ಎಂದು ವಚನದಲ್ಲಿ ಹೇಳಿರುವುದು ಅರ್ಥಪೂರ್ಣವಾಗಿದೆ. ನಾವು ವಚನದ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಬೇಕು. ಆಗ ಮಾತ್ರ ಸಂಸ್ಕಾರ, ಸಂಸ್ಕೃತಿ ನೆಲೆ ಊರಲು ಸಾಧ್ಯ ಎಂದರು.
ಊಟ ಮಾಡುವಾಗ ಏಕಾಗ್ರತೆಯಿಂದ ಮಾಡಬೇಕು. ಇದರಿಂದ ಆರೋಗ್ಯ, ಸಮಾಧಾನ ಇರುತ್ತದೆ. ಅರಗಿಸುವ ಶಕ್ತಿ ಸರಾಗವಾಗುತ್ತದೆ. ಹಣ, ಅಂತಸ್ತು ಮಾಡುವ ದುರಾಸೆಯಲ್ಲಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜನರಿಗಿಂತ ಹೆಚ್ಚಾಗಿ ಮೊಬೈಲ್ ಎಲ್ಲರಿಗೂ ಸಮೀಪವಾಗುತ್ತಿರುವುದು ಕಳವಳಕಾರಿ. ಊಟ, ತಿಂಡಿ ತಿನ್ನುವ ಸಮಯದಲ್ಲಾದರೂ ಅದನ್ನು ದೂರವಿಡಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಕಾರ್ಯದರ್ಶಿ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ಲಿಂಗವು ಜಾತಿ ಸೂಚಕವಲ್ಲ, ಜ್ಯೋತಿಯ ಸೂಚಕವಾಗಿದೆ. ಲಿಂಗ ಧರಿಸಿದ ಪ್ರತಿಯೊಬ್ಬರೂ ಲಿಂಗಾಯತರು. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾಯಕದ ಮೂಲಕ ಕಾಯ ಶುದ್ಧ ಮಾಡಿಕೊಂಡು ಕೈಲಾಸ ಕಂಡವರು ಶಿವಶರಣರಾಗಿದ್ದಾರೆ ಎಂದರು.
ಯುಗಧರ್ಮ ರಾಮಣ್ಣ, ತುಮ್‌ಕೋಸ್ ನಿರ್ದೇಶಕ ಟಿ.ವಿ.ರಾಜು ಪಟೇಲ್, ಶಾಮನೂರು ಚಂದ್ರಶೇಖರಪ್ಪ, ತಾಲೂಕು ಘಟಕದ ಅಧ್ಯಕ್ಷ ವಕೀಲ ಎಂ. ರಾಜಪ್ಪ, ಎಂ.ಯು. ಚನ್ನಬಸಪ್ಪ, ಎಂ.ಜಿ. ಧನಂಜಯ್, ಕೆ.ಜಿ. ಶಿವಮೂರ್ತಿ, ಟಿ.ವಿ. ಚಂದ್ರಪ್ಪ ಇತರರಿದ್ದರು.