

ಚನ್ನಗಿರಿ: ಚನ್ನಗಿರಿ- ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮಸ್ಯೆಗಳನ್ನು ಅಧಿಕಾರಿಗಳ ಸಭೆ ಕರೆದು ಸ್ಥಳ ಪರಿಶೀಲನೆ ನಡೆಸಿ, ಬಗೆಹರಿಸಲಾಗಿದೆ. ಇನ್ನು 45 ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಕರೆದಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಆರಂಭವಾಗಿ ಅವಧಿ ಮುಗಿಯುತ್ತ ಬಂದಿದ್ದು, ಜನ ಸೇವೆಗೆ ನೀಡಬೇಕಾಗಿತ್ತು. ಆದರೆ, ರಸ್ತೆ ನಿರ್ಮಾಣದಲ್ಲಿ ಕೆಲ ನ್ಯೂನತೆಗಳ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ, ಸಿದ್ಧಪಡಿಸಲಾಗಿದೆ. ಚನ್ನಗಿರಿ ಬಳಿಯ ರಸ್ತೆಯಲ್ಲಿ ನಿರ್ಮಿಸಿರುವ ಎರಡು ಜಂಕ್ಷನ್ ಸರಿಪಡಿಸುವಂತೆ ಸೂಚಿಸಲಾಗಿದೆ. ಎಲ್ಲವನ್ನೂ ಸರಿಪಡಿಸಿ ಶೀಘ್ರವೇ ಸೇವೆಗೆ ನೀಡಲಿದ್ದೇವೆ ಎಂದರು.
ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡಕೆ ಬೆಳೆಗಾರರು ಇದ್ದಾರೆ. ಅಡಕೆ ಬೆಳೆ ಸೀಸನ್ ಪ್ರಾರಂಭವಾಗಿದ್ದು, ಅಡಕೆ ಸುಲಿದು ಸಿಪ್ಪೆಯನ್ನು ರಸ್ತೆ ಇಕ್ಕೆಲ ಸುರಿದು, ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿ ಆಗುತ್ತದೆ. ಅಪಘಾತಗಳು ಸಹ ಸಂಭವಿಸುತ್ತಿವೆ. ಎಲ್ಲೆಂದರಲ್ಲಿ ಸುಪ್ಪೆ ಸುರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಬೆಳೆಗಾರರು ರಸ್ತೆ ಬದಿ ಬದಲು ತೋಟ, ಜಮೀನುಗಳಲ್ಲಿ ಗುಂಡಿ ತೆಗೆದು ಗೊಬ್ಬರ ತಯಾರಿ ಮಾಡಿಕೊಳ್ಳಬಹುದು. ಇದಕ್ಕೆ ಕೃಷಿ ಇಲಾಖೆ ಸಬ್ಸಿಡಿ ನೀಡುತ್ತದೆ ಎಂದರು.
ಪಟ್ಟಣದ ಮುಖ್ಯರಸ್ತೆಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ಅಧಿಕವಾಗಿದೆ. ಇದರಿಂದ ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗಿದೆ. ಜಾನುವಾರು ಬೀದಿಗೆ ಬಿಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗಾಗಿ ಎಲ್ಲ ರಸ್ತೆಗಳಲ್ಲಿ ಪೈಪ್‌ಲೈನ್ ಅಳವಡಿಸಿದ ಕಾರಣದಿಂದ ಸಂಚಾರಕ್ಕೆ ಸಮಸ್ಯೆ ಆಗಿದೆ. ಅಧಿಕಾರಿಗಳ ಸಭೆ ಕರೆದು ತುರ್ತಾಗಿ ಕಾಮಗಾರಿ ಮುಗಿಸಲು ಆದೇಶಸಿದ್ದೇನೆ. ಪ್ರತಿ ತಿಂಗಳು ಚನ್ನಗಿರಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿ ಹಂತ ಹಂತವಾಗಿ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದರು.
ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಮಾತನಾಡಿ, ಬಯೋಮಾಸ್ ಇರುವ ವಸ್ತು ರಸ್ತೆಯಲ್ಲಿ ಹಾಕಿ ಸುಡುವುದು ಅಪರಾಧ. ಇದರಿಂದ ಪರಿಸರ ಮತ್ತು ಜನರು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.
ರೈತರು ಅಡಕೆ ಸಿಪ್ಪೆ ರಸ್ತೆ ಪಕ್ಕ ಸುಡುವುದನ್ನು ಬಿಡಬೇಕು. ಕಾನೂನು ಮೀರಿ ಅಂತಹ ಕೆಲಸ ಮಡುವವರ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ ಎಂದರು.
ತಹಸೀಲ್ದಾರ್ ರುಕ್ಮಿಣಿಬಾಯಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟೆಮನಿ, ಲೋಕೋಪಯೋಗಿ ಎಇಇ ರವಿಕುಮಾರ್, ಯುಜಿಡಿ ಎಇಇ ಗುರುದತ್ತ ಇತರರಿದ್ದರು.