ಸಸಿ ಬೆಳೆಸಿದರೆ ವಾತಾವರಣದಲ್ಲಿ ಹಸಿರು

Channagiri, Sasi, Vanamahotsava,
Published on

ಚನ್ನಗಿರಿ: ಅಭಿವೃದ್ಧಿ ಹೆಸರಿನಲ್ಲಿ ರಸ್ತೆಬದಿಯ ಮರಗಳನ್ನು ಕಡಿಯುವುದು ತಪ್ಪಲ್ಲ. ಆ ಜಾಗದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕನ್ನಡ ನಾಡು ಹಿತರಕ್ಷಣಾ ಸಮಿತಿ ನಗರ ಘಟಕದ ಅಧ್ಯಕ್ಷ ನಟರಾಜ್ ರಾಯ್ಕರ್ ಸಲಹೆ ನೀಡಿದರು.

ತಾಲೂಕು ಸರ್ಕಾರಿ ಆಸ್ಪತ್ರೆಯ ಬಳಿ ಕನ್ನಡ ನಾಡು ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಗುರುವಾರ ಪರಿಸರ ದಿನದ ಅಂಗವಾಗಿ ಭುವನೇಶ್ವರಿ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಚಾಲನೆ ನೀಡಿದರು.

ಮನೆಗೊಂದು ಸಸಿ ಮಗುವಿಗೆ ಒಂದು ಸಸಿ ಎನ್ನುವಂತೆ ಭುವನೇಶ್ವರಿ ಹೆಸರಿನಲ್ಲಿ ಕನ್ನಡಿಗರಾದ ನಾವು ಅಭಿಮಾನದ ಜತೆ ಒಬ್ಬರು ಒಂದು ಸಸಿ ನೆಟ್ಟು ಬೆಳೆಸಿದರೆ ಸಾಕು. ನಮ್ಮ ಸುತ್ತಲು ಹಸಿರು ವಾತಾವರಣ ಕಂಡು ಬರುತ್ತದೆ. ಶಾಲಾ- ಕಾಲೇಜು ಆವರಣ, ಕೆರೆಬದು, ಪಟ್ಟಣ ಗ್ರಾಮಗಳಲ್ಲಿ ಸ್ಥಳವಿರುವ ಕಡೆ ಸಸಿ ಬೆಳೆಸಬೇಕು ಎಂದರು.

ಕನ್ನಡ ಭಾಷೆಗೆ ನೂರಾರು ವರ್ಷಗಳ ಇತಿಹಾಸ ಇದೆ. ಪ್ರಪಂಚದ ಯವುದೇ ಸ್ಥಳದಲ್ಲಿದ್ದರೂ ನಾವು ಕನ್ನಡಿಗರು ಎನ್ನುವ ಹೆಮ್ಮೆ ಬರಬೇಕು. ಪ್ರತಿಯೊಬ್ಬರ ಉಸಿರಾಗಬೇಕು. ಪರಭಾಷೆ ಕಲಿಕೆ ತಪ್ಪಲ್ಲ. ಅದರೆ, ಕಲಿಕೆಯಲ್ಲಿ ಮಾತೃಭಾಷೆ ಮರೆಯಬಾರದು ಎಂದರು.

ಕನ್ನಡಕ್ಕೆ ಕುತ್ತು ಬಂದಾಗ ಹೋರಾಡಲು ಮುಂದಾಗಬೇಕು. ಕನ್ನಡಿಗರಾದ ನಾವೇ ಮಾತೃಭಾಷೆ ಮರೆತರೆ, ಬೇರೆಯವರು ಅದನ್ನು ನಾಶ ಮಾಡುತ್ತಾರೆ ಎಂದರು.

ಕನ್ನಡ ನಾಡು ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಅಣ್ಣೋಜಿರಾವ್, ಅಲ್ಪಸಂಖ್ಯಾತರ ಗೌರವಾಧ್ಯಕ್ಷ ಸರದಾರ್, ಕಾಲೇಜು ವರ್ಗದ ಅಧ್ಯಕ್ಷ ನವೀನ್‌ಕೀಶೋರ್, ಅಮ್ಜದ್‌ಖಾನ್, ಉಮೇಶ್, ನಾಗರತ್ನ, ಕಾವ್ಯ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net