

ಚನ್ನಗಿರಿ: ಪಠ್ಯದ ಜತೆ ಪಠ್ಯೇತರ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಹೊಸ ವಿಷಯ ಕಲಿಯಲು ಪ್ರಯೋಜನಕರವಾಗಿದೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ದ್ಯಾಮೇಶ್ ಅಭಿಪ್ರಾಯಪಟ್ಟರು.
ತಾಲೂಕು ಸಂತೇಬೆನ್ನೂರು ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೆಕ್ಕೆಜೋಳ ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸದ ಜತೆ ನವೀನ ಶಿಕ್ಷಣ ಆಧಾರಿತ ಶಾಲೆಯ ಆವರಣದಲ್ಲಿ ಮೆಕ್ಕೆಜೋಳ ಬೆಳೆದಿರುವುದು ಮಕ್ಕಳಿಗೆ ಕೃಷಿ ಪರಿಚಯ ಮಾಡಿಕೊಟ್ಟಂತಾಗುತ್ತದೆ. ವ್ಯಾಸಂಗದ ಬಳಿಕ ಉದ್ಯೋಗ ಸಿಗದಿದ್ದರೂ ಸ್ವಾವಲಂಬಿ ಬದುಕು ಸಾಗಿಸಲು ಅನುಕೂಲವಾಗಲಿದೆ. ವ್ಯವಸಾಯ ಪದ್ಧತಿ, ನಾಟಿ, ಕಳೆ ಕೀಳುವುದು ಮತ್ತಿತರ ಕೃಷಿ ಕೆಲಸಗಳನ್ನು ಸಣ್ಣ ವಯಸ್ಸಿನಲ್ಲೇ ಕಲಿತರೆ ಉತ್ತಮ ಎಂದರು.
ಸಮಾಜ ವಿಜ್ಞಾನ ಶಿಕ್ಷಕ ನಾಗರಾಜ್ ಮಾತನಾಡಿ, ಶಾಲಾ ಕೈದೋಟದಲ್ಲಿ ಕೃಷಿ ಆಧಾರಿತ ಮೆಕ್ಕೇಜೋಳ ಬೆಳೆಸಿ ಮಕ್ಕಳ ವಿದ್ಯಾಭ್ಯಾಸದ ಜತೆ ಕೃಷಿ ಕಲಿಕೆಗೆ ಪ್ರೋತ್ಸಾಹ ನೀಡಿರುವುದು ಸಂತಸವಾಗಿದೆ. ಪಾಲಕರು ಕಷ್ಟ ಅನುಭವಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಆದ್ದರಿಂದ ಕಲಿಕೆ ಜತೆ ಕೌಶಲ ಕಲಿಸುವುದು ಮುಂದಿನ ಜೀವನಕ್ಕೆ ದಾರಿಯಾಗಲಿದೆ ಎಂದರು.
ಶಿಕ್ಷಕ ಫೈಜ್ನಟ್ರಾಜ್ ಮಾತನಾಡಿ, ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ಬೋಧನೆ ಜತೆ ಮಣ್ಣಿನ ಬಾಂಧವ್ಯ ಮತ್ತು ಕೃಷಿ ಕಲಿಕೆಯ ಪರಿಸರ ಪಾಠ ಸಾಗುತ್ತಿರುವುದು ಮಾದರಿಯ ಹೆಜ್ಜೆಯಾಗಿದೆ ಎಂದರು.
ಶಿಕ್ಷಕರಾದ ಮಲ್ಲೇಶ್‌ಕುಮಾರ್, ಸುಧೀರ್, ಜಾಕೀರ್ ಹುಸೇನ್, ಗಾಯತ್ರಿ, ಸವಿತಾ, ಚಂದ್ರಪ್ಪ, ಮಲ್ಲೇಶಪ್ಪ, ಜ್ಯೋತಿ ಕುಮಾರ್ ಇತರರಿದ್ದರು.