

ಚನ್ನಗಿರಿ: ಬಾಕಿ ವೇತನ ಪಾವತಿ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಪಂ ನೌಕರರು, ಬಿಲ್ ಕಲೆಕ್ಟರ್, ವಾಟರ್‌ಮ್ಯಾನ್, ಜವಾನ, ಕಂಪ್ಯೂಟರ್ ಅಪರೇಟರ್‌ಗಳು ಸೋಮವಾರ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ತಾಪಂ ಇಒ ಎಂ.ಆರ್.ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಭೀಮಾನಾಯ್ಕ ಮಾತನಾಡಿ, ನೀರುಗಂಟಿ, ಪಂಪ್ ಆಪರೇಟರ್‌ಗಳಿಗೆ ಅರ್ಧ ವೇತನ ನೀಡುವ ಉದ್ದೇಶವನ್ನು ಸರ್ಕಾರ ಕೈಬಿಡಬೇಕು. ಬಾಕಿ ವೇತನ ಬಿಡುಗಡೆ ಜತೆಗೆ ತಿಂಗಳಾಂತ್ಯದಲ್ಲಿ ಸಂಬಳ ನೀಡಲು ಕ್ರಮ ಕೈಗೊಳ್ಳಬೇಕು. ಕೋವಿಡ್-19 ಕಾರ್ಯ ನಿರ್ವಹಿಸುವ ನೌಕರರಿಗೆ ಆರೋಗ್ಯ ವಿಮೆ, ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಪಂಚಾಯತ್ ರಾಜ್ ಕಾಯ್ದೆಯ 12ರ ನಿಯಮದಂತೆ ಡಿ.ದರ್ಜೆಗೆ 28950 ಸಾವಿರ, ಸಿ.ದರ್ಜೆ ನೌಕರರಿಗೆ 36950 ರೂ. ವೇತನ ನಿಗದಿಪಡಿಸಬೇಕು. ನೌಕರರ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಇಎಂಎಫ್‌ಎಸ್‌ಗೆ ಅಳವಡಿಸಬೇಕು. ನಿವೃತ್ತರಿಗೆ 1995ರ ಆದೇಶದನ್ವಯ ಗ್ರಾಚ್ಯುಟಿ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಎಸ್.ಓಂಕಾರಪ್ಪ, ಖಜಾಂಚಿ ಚೇತನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಶ್ರೀನಿವಾಸ್‌ಚಾರ್, ಕಾರ್ಯದರ್ಶಿ ಗೋವಿಂದ ಪ್ರತಿಭಟನೆಯಲ್ಲಿದ್ದರು.