ದೇಶ ಸೇವೆ ಮಾಡಿ ಬಂದ ಸೈನಿಕನಿಗೆ ಅದ್ದೂರಿ ಸ್ವಾಗತ

Channagiri, Retired Army, Welcome,
Published on

ಚನ್ನಗಿರಿ: ಭಾರತೀಯ ಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ನಿರ್ವಹಿಸಿ ನಿವೃತ್ತಿಯಾಗಿ ಬಂದ ಮಾದೇನಹಳ್ಳಿ ಗ್ರಾಮದ ಎಂ. ಶ್ರೀನಿವಾಸ್ ಅವರಿಗೆ ಚನ್ನಗಿರಿಯಲ್ಲಿ ಮಂಗಳವಾರ ಭವ್ಯ ಸ್ವಾಗತ ಕೋರಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಜನರು ದಾರಿಯುದ್ದಕ್ಕೂ ಪುಷ್ಪ ಎರಚಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಮುಖಂಡ ಎಚ್.ಎಸ್. ಶಿವಕುಮಾರ್, ಹಿರೇಮಠದ ಶ್ರೀ ಕೇದಾರಲಿಂಗ ಶಾಂತವೀರ ಸ್ವಾಮಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಭಾರತೀಯ ಸೇನೆಯಲ್ಲಿ ಕೆಲಸ ಮಾಡುವುದು ಒಂದು ಸೌಭಾಗ್ಯ. ದೇಶ ಕಾಯುವ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಸೇನೆಗೆ ಬೇಕಾದ ಎಲ್ಲ ಅಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರ ಜತೆಯಲ್ಲಿ ಇದ್ದುಕೊಂಡು ಆತ್ಮಸ್ಥೈರ್ಯ ನೀಡುವ ಕೆಲಸ ಮಾಡಿದ್ದಾರೆ ಎಂದರು.

ಯೋಧ ಎಂ. ಶ್ರೀನಿವಾಸ ಮಾತನಾಡಿ, ಹದಿನೈದು ವರ್ಷ ಆರು ತಿಂಗಳು ಜಮ್ಮು, ಕಾಶ್ಮೀರ, ಜಲಂದರ್, ಪಟಾನ್‌ಕೋಟ್ ಮತ್ತು ಉತ್ತರ ಪ್ರದೇಶಗಳಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದೇನೆ. ಮನೆಯಲ್ಲಿ ವಸ್ಸಾದ ತಂದೆತಾಯಿಗಳನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅದಕ್ಕಾಗಿ ಸ್ವಯಂ ನಿವೃತ್ತಿ ಪಡೆದು ಬಂದಿದ್ದೇನೆ ಎಂದರು.

ನವೀನ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಕಾಯಿ ಮಂಜಣ್ಣ, ತಿಮ್ಮೇಶ್, ರಾಜಣ್ಣ, ಜೆ.ಕೆ. ಮಧು, ಮಂಜುನಾಥ್, ಆರ್.ಪಿ. ತಿಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net