

ಚನ್ನಗಿರಿ: ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ತಾಲೂಕಿನ ರೈತರು ವರುಣನ ಕೃಪೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ.
ತಾಲೂಕಿನಲ್ಲಿ ವಾಡಿಕೆ ಪ್ರಕಾರ ಜನವರಿಯಿಂದ ಜೂನ್‌ವರೆಗೆ 171.6 ಮಿಮೀ ಮಳೆ ಆಗಬೇಕಿತ್ತು. ಆದರೆ ಇದುವರೆಗೆ 79.9 ಮಿ.ಮೀ. ಮಳೆಯಾಗಿದ್ದು ಶೇ. 53ರಷ್ಟು ಕೊರತೆ ಆಗಿದೆ.
ತಾಲೂಕಿನಲ್ಲಿ 38 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. 22,500 ಹೆ.ಮೆಕ್ಕೆಜೋಳ, 12500 ಹೆ. ಭತ್ತ, 1000 ಹೆ. ರಾಗಿ, 650 ಹೆ. ತೊಗರಿ, 350 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿದೆ.
ಆರು ಹೋಬಳಿಗಳಲ್ಲಿ ಬಿತ್ತನೆ ಬೀಜ ವಿತರಣಾ ಕೇಂದ್ರ ತೆರೆದಿದ್ದು ಚನ್ನಗಿರಿಯ ಟಿಎಪಿಎಂಎಸ್, ಪಾಂಡೋಮಟ್ಟಿ, ದೇವರಹಳ್ಳಿ, ಸಂತೇಬೆನ್ನೂರು, ಬಸವಾಪಟ್ಟಣ ಹಾಗೂ ತ್ಯಾವಣಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದದಡಿ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಮುಂಗಾರಿನಲ್ಲಿ 19,350 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಒಟ್ಟು 12 ಸಹಕಾರ ಸಂಘಗಳು, 138 ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ಜೂನ್ ತಿಂಗಳ ಬೇಡಿಕೆಗೆ ಅನುಗುಣವಾಗಿ 6325 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ.
ರೈತರು ಅಧಿಕೃತ ಪರಿಕರ ಮಾರಾಟಗಾರರು ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ಬಿತ್ತನೆ ಬೀಜಗಳನ್ನು ಖರೀದಿಸಬೇಕು. ಬಿಡಿಯಾಗಿ ಮೆಕ್ಕೆಜೋಳದ ಬೀಜಗಳನ್ನು ಮಾರಾಟ ಮಾಡುವುದು ನಿಷಿದ್ಧ ಹಾಗೂ ಕಾನೂನು ಬಾಹಿರವಾಗಿ ಮಾರಾಟ ಮಾಡುವುದು ಕಂಡುಬಂದರೆ ಇಲಾಖೆಯ ಗಮನಕ್ಕೆ ತರಬೇಕು.
ಅರುಣ್‌ಕುಮಾರ್ ಗುನ್ನಾ, ಸಹಾಯಕ ಕೃಷಿ ನಿರ್ದೇಶಕ, ಚನ್ನಗಿರಿ.