

ಚನ್ನಗಿರಿ: ಉಚಿತ ಪ್ರಯಾಣ ಸೌಲಭ್ಯದಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಖಾಸಗಿ ಬಸ್ ಮಾಲೀಕರ ಸಂಘದವರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪಿ.ಎಸ್.ಯರ‌್ರಿಸ್ವಾಮಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮಾತನಾಡಿ, ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಮತ್ತು ದಾವಣಗೆರೆ ಜಿಲ್ಲೆಯಲ್ಲಿ 600 ಖಾಸಗಿ ಬಸ್‌ಗಳು ಓಡಾಡುತ್ತಿವೆ. ಒಂದು ಬಸ್‌ನಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನೇಕ ಕುಟುಂಬಗಳು ಬದುಕುತ್ತಿವೆ. ವಾರ್ಷಿಕ 2 ಲಕ್ಷ ರೂ. ತೆರಿಗೆ ಕಟ್ಟಬೇಕಿರುತ್ತದೆ. ಡೀಸೆಲ್ ದರ ಏರಿಕೆಯಿಂದ ರಸ್ತೆಗೆ ವಾಹನ ಇಳಿಸುವುದೇ ಕಷ್ಟವಾಗಿದೆ. ಉಚಿತ ಬಸ್ ಪ್ರಯಾಣ ಘೋಷಿಸಿದ ದಿನದಿಂದ ಮಹಿಳಾ ಪ್ರಯಾಣಿಕರು ಖಾಸಗಿ ಬಸ್‌ಗಳತ್ತ ಬರುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಅನೇಕರು ಬಸ್ ವ್ಯವಹಾರ ಬಿಟ್ಟು ತರಕಾರಿ, ಚಿಲ್ಲರೆ ಅಂಗಡಿ ಇಟ್ಟುಕೊಂಡು ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಉಚಿತ ಪ್ರಯಾಣ ಕಲ್ಪಿಸಿ, ನಮಗೆ ತೊಂದರೆ ನೀಡಿದೆ. ಸರ್ಕಾರ ಖಾಸಗಿ ಬಸ್ ಮಾಲೀಕರಿಗೆ ಪ್ರತ್ಯೇಕ ರಿಯಾಯಿತಿ ಹಾಗೂ ಡೀಸೆಲ್ ಸಬ್ಸಿಡಿ ದರದಲ್ಲಿ ನೀಡಿದರೆ ನಾವು ಸಹ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ನೀಡುತ್ತೇವೆ ಎಂದರು.
ಸಂಘದ ಎಂ.ಆರ್.ಸತೀಶ್, ಲೇಕ್‌ಪಾಷ, ಎ.ವಿ.ಅಜ್ಜಪ್ಪ, ಸುದೀಪ್, ರುದ್ರೇಶ್, ಸಿದ್ದರಾಮಪ್ಪ, ನವೀನ್, ಕಿರಣ್‌ಕುಮಾರ್, ಬಸವರಾಜ್, ಕುಮಾರಪ್ಪ ಇತರರಿದ್ದರು.
ಉಚಿತ ಪ್ರಯಾಣ ಸೌಲಭ್ಯದಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಖಾಸಗಿ ಬಸ್ ಮಾಲೀಕರ ಸಂಘದವರು ಸೋಮವಾರ ಚನ್ನಗಿರಿಯಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ, ಎಂ.ಆರ್.ಸತೀಶ್, ನವೀನ್, ಸುದೀಪ್, ರುದ್ರೇಶ್, ಎ.ವಿ.ಅಜ್ಜಪ್ಪ, ಕಿರಣ್‌ಕುಮಾರ್ ಇತರರಿದ್ದರು.