ಅಭಿವೃದ್ಧಿ ಬೇಕು ಎಲ್ಲರ ಸಹಕಾರ

Channagiri, progress review, KDP meeting,
Published on

ಚನ್ನಗಿರಿ: ಕ್ಷೇತ್ರದ ಅಭಿವೃದ್ಧಿ ಕೇವಲ ಜನಪ್ರತಿನಿಧಿಗಳಿಂದ ಸಾಧ್ಯವಿಲ್ಲ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪ್ರತಿಯೊಬ್ಬರು ಸಹಕಾರ ನೀಡಿದರೆ ಮಾತ್ರ ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಾಧ್ಯ ಎಂದು ಶಾಸಕ ಶಿವಗಂಗಾ ವಿ. ಬಸವರಾಜ್ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2023- 24ನೇ ಸಾಲಿನ ಮೊದಲನೇ ತ್ರೈಮಾಸಿಕ ಸಭೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಮಟ್ಟದ ಅಧಿಕಾರಿಗಳಿಗೆ ಶಾಸಕನಾದ ಪ್ರಥಮದಲ್ಲಿ ಇಲಾಖೆಗೆ ಸಂಬಂಧಿತ ಮಾಹಿತಿ ನೀಡುವಂತೆ ಅನೇಕ ಬಾರಿ ಹೇಳಲಾಗಿದೆ. ಆದರೆ, ನಿರ್ಲಕ್ಷ್ಯ ಕಾಣಲಾಗುತ್ತಿದೆ. ಮುಂದಿನ ದಿನದಲ್ಲಿ ಪ್ರತಿ ಮಾಹಿತಿ ನಮಗೆ ನೀಡಬೇಕು. ಅಭಿವೃದ್ಧಿಗಾಗಿ ಸ್ಪಂದಿಸಬೇಕು ಎಂದರು.

ಅಕ್ರಮ ಸಾಗುವಳಿ ತೆರವಿಗೆ ಸೂಚನೆ: ವಿವಿಧ ಗ್ರಾಮಗಳಲ್ಲಿ ಚಿರತೆ ಹಾವಳಿ ಇದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಕಗ್ಗಿ ಗ್ರಾಮ, ಚನ್ನಗಿರಿ ನಂದೀಶ್ ಫಾರಂ ಬಳಿ ನಾಲ್ಕು ದಿನಗಳಿಂದ ನಿತ್ಯವೂ ಬರುತ್ತಿದೆ. ಅರಣ್ಯಾಧಿಕಾರಿಗಳು ಅವುಗಳನ್ನು ಹಿಡಿಯುವಂಥ ಕೆಲಸ ಮಾಡಬೇಕು. ಕಾಡಂಚಿನ ಪ್ರದೇಶ ಒತ್ತುವರಿ ಮಾಡಿ ಸಾಗುವಳಿ ಮಾಡಲಾಗುತ್ತಿದೆ. ಇದನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.

ಮಾಯಕೊಂಡ ಶಾಸಕ ಬಸವಂತಪ್ಪ ಮಾತನಾಡಿ, ಸಭೆಗೆ ಗೈರಾಗುವ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕ್ಷೇತ್ರದ ಬಸವಾಪಟ್ಟಣ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ವಿ.ಕೆ.ಉತ್ತಮ, ತಹಸೀಲ್ದಾರ್ ಪಿ.ಎಸ್.ಯರ‌್ರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net