

ಚನ್ನಗಿರಿ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಕೆಲಸವಲ್ಲ. ಇದಕ್ಕೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಪೊಲೀಸ್ ಮಹಾನಿರ್ದೇಶಕ ಡಾ.ಕೆ. ತ್ಯಾಗರಾಜ್ ತಿಳಿಸಿದರು.
ಚನ್ನಗಿರಿ ಠಾಣೆಗೆ ಭೇಟಿ ನೀಡಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ಎಲ್ಲರಂತೆ ಮನುಷ್ಯರು. ಅವರು ಹಗಲು ರಾತ್ರಿಯೆನ್ನದೇ ಕಾರ್ಯನಿರ್ವಹಿಸುತ್ತಾರೆ. ಇಷ್ಟಾದರೂ ಕೈಮೀರಿ ಕೆಲ ಅಪರಾಧಗಳು ಜರುಗುತ್ತವೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎಂದು ಹೇಳಿದರು.
ನಲ್ಲೂರು ಗ್ರಾಮದಲ್ಲಿ ಜನಸಂಖ್ಯೆ ಅಧಿಕವಾದ ಕಾರಣ ಪೊಲೀಸ್ ಠಾಣೆ ನಿರ್ಮಿಸುವಂತೆ ಸ್ಥಳೀಯರು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಪಿ ಡಾ. ಸಂತೋಷ್, ಸಿಪಿಐ ನಿರಂಜನ್, ಲಿಂಗನಗೌಡ್ರು ಇದ್ದರು.