

ಚನ್ನಗಿರಿ: 12ನೇ ಶತಮಾನದಲ್ಲಿ ಬಸವಾದಿ ಶರಣರು ಬರೆದಿಟ್ಟ ವಚನಗಳು ಕಲ್ಯಾಣ ಕ್ರಾಂತಿ ಬಳಿಕ ಹರಿದು ಹಂಚಿ ಹೋಗಿದ್ದವು. ಅವುಗಳನ್ನು ಕಾಪಾಡಿಕೊಳ್ಳಲು ಹೋರಾಡಿದ ಫ.ಗು. ಹಳಕಟ್ಟಿ ಅವರನ್ನು ನಿತ್ಯವೂ ಸ್ಮರಿಸಬೇಕಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಮಂಗಳವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ, ಪಾಂಡೋಮಟ್ಟಿಯ ವಿರಕ್ತಮಠ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಸ್ಮರಣೆ ಹಾಗೂ ವಚನಗಳ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ವಿವಿಧ ಕಡೆಗಳಲ್ಲಿದ್ದ ವಚನಗಳನ್ನು ನಿರಂತರವಾಗಿ 35 ವರ್ಷ ಕಲೆಹಾಕಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿ, 10 ಸಾವಿರ ವಚನಗಳನ್ನು ಮುದ್ರಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದರು. ಅವರನ್ನು ಜಯಂತಿಯಂದು ಮಾತ್ರ ಸ್ಮರಿಸದೇ ನಿತ್ಯವೂ ನೆನೆಯಬೇಕು ಎಂದರು.
ನಿವೃತ್ತಿ ಪ್ರಾಚಾರ್ಯ ಜಿ.ಬಿ. ಚಂದ್ರಶೇಖರಪ್ಪ ಉಪನ್ಯಾಸ ನೀಡಿ, ಮೈಸೂರು ಮಹಾರಾಜರು ಒಮ್ಮೆ ಹಳಕಟ್ಟಿ ಅವರಿಗೆ ಸಹಾಯ ನೀಡಲು ಇಚ್ಛಿಸಿದಾಗ ವಚನ ಮುದ್ರಿಸಲು ಮುದ್ರಣಕ್ಕೆ ಅಳವಡಿಸುವ ಮೊಳೆಗಳನ್ನು ಲಂಡನ್‌ನಿಂದ ತರಿಸಿಕೊಡುವಂತೆ ಮನವಿ ಮಾಡಿದರು. ಮನೆಯಲ್ಲಿ ಅನೇಕ ಕಷ್ಟ, ಸಮಸ್ಯೆಗಳಿದ್ದರೂ ತನಗಾಗಿ ಏನನ್ನೂ ಬೇಡಲಿಲ್ಲ. ಸಮಾಜಕ್ಕಾಗಿ ಜನರ ಸೇವೆಗಾಗಿ ಕಳೆದವರಲ್ಲಿ ಒಬ್ಬರಾಗಿದ್ದಾರೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಕಾರ್ಯದರ್ಶಿ ಪುಷ್ಪವತಿ, ಸಿಪಿಐ ಸಂತೋಷ್‌ಕುಮಾರ್, ವರ್ತಕ ಸಿರಾಜ್ ಅಹ್ಮದ್, ಜಿ. ಚಿನ್ನಸ್ವಾಮಿ, ಎಂ.ಯು. ಚನ್ನಬಸಪ್ಪ, ತಾಲೂಕು ಲಿಂಗಾಯತ ಸಮಾಜದ ಅಧ್ಯಕ್ಷ ಎಂ. ರಾಜಪ್ಪ ಇತರರಿದ್ದರು.