ರೇಬಿಸ್ ರೋಗ ನಿರ್ಮೂಲನೆಗೆ ಪಣ

Channagiri, pet dog, rabies, vaccine,
Published on

ಸಹಾಯಕ ನಿರ್ದೇಶಕ ಡಾ.ಅಶೋಕ್‌ಕುಮಾರ್ ಹೇಳಿಕೆ I ಚನ್ನಗಿರಿಯಲ್ಲಿ ಮಾಸಾಚರಣೆ

ಚನ್ನಗಿರಿ: ದೇಶದಲ್ಲಿ 2030ರ ವೇಳೆಗೆ ರೇಬಿಸ್ ರೋಗ ನಿರ್ಮೂಲನೆಗೊಳಿಸುವ ಧ್ಯೇಯ ಹೊಂದಲಾಗಿದೆ ಎಂದು ಪಶು ಆಸ್ಪತ್ರೆ ತಾಲೂಕು ಸಹಾಯಕ ನಿರ್ದೇಶಕ ಡಾ.ಅಶೋಕ್‌ಕುಮಾರ್ ತಿಳಿಸಿದರು.

ತಾಲೂಕಿನ ಪಶು ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೇಬೀಸ್ ರೋಗ ಲಸಿಕಾ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.

ಬಿಸಿರಕ್ತವುಳ್ಳ ಮಾನವರು ಮತ್ತಿತರ ಪ್ರಾಣಿಗಳಲ್ಲಿ ತೀವ್ರತರ ಮಿದುಳಿನ ಉರಿಯೂತ ಉಂಟುಮಾಡುವ ರೇಬಿಸ್, ವೈರಸ್‌ನಿಂದ ಬರುವ ರೋಗ. ಅರಿವು, ತರಬೇತಿ ಮತ್ತು ಲಸಿಕೆ ನೀಡುವ ಮೂಲಕ ರೋಗ ನಿರ್ಮೂಲನೆಗೆ ಪಣ ತೊಡಲಾಗಿದೆ ಎಂದರು.

ಹುಚ್ಚುನಾಯಿ ಕಡಿತ ತುಂಬಾ ಅಪಾಯಕಾರಿ. ಇದರ ಸೋಂಕಿನಿಂದ ರೋಗಪೀಡಿತ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಡಿದ ಜಾಗದಲ್ಲಿ ನೋವು ಮತ್ತು ನರಗಳ ಬಾಧೆ, ಮಾಂಸಖಂಡಗಳ ಸಂಕೋಚನ ಮತ್ತಿತರ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂದರು.

ಪ್ರಾಣಿ ನಿಯಂತ್ರಣ ಮತ್ತು ಲಸಿಕೆ ಕಾರ್ಯಕ್ರಮಗಳು ಸಾಕಷ್ಟು ರೇಬಿಸ್ ರೋಗ ಕಡಿಮೆ ಮಾಡುತ್ತ ಬಂದಿವೆ. ರೋಗ ಕಾಣಿಸಿಕೊಳ್ಳುವ ಮೊದಲೇ ಲಸಿಕೆ, ಸೂಕ್ತ ಚಿಕಿತ್ಸೆ ಪಡೆದರೆ ಅದನ್ನು ತಡೆಯಬಹುದು ಎಂದರು.

ವಿಶ್ವಾದ್ಯಂತ ವಾರ್ಷಿಕ 55 ಸಾವಿರ ಸಾವು ಸಂಭವಿಸುತ್ತಿವೆ. 15 ದೇಶಗಳಲ್ಲಿ ರೇಬಿಸ್ ರೋಗ ಕಂಡು ಬರುತ್ತಿದೆ. ಮನೆಯಲ್ಲಿ ಸಾಕು ನಾಯಿಗಳನ್ನು ಸಾಕುವಾಗ ಸಕಾಲಕ್ಕೆ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದರು.

ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಲಿ, ಡಾ.ದರ್ಶನ್, ಡಾ.ವಿನಯ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ನಾಗರಾಜ್ ನಾಡಿಗ್, ಎಂ.ಬಿ.ಶಿವಕುಮಾರ್, ಮಹೇಶ್‌ಕುಮಾರ್ ಜವಳಿ ಇತರರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಲಯನ್ಸ್ ಕ್ಲಬ್ ಚನ್ನಗಿರಿ ಚನ್ನಮ್ಮಾಜಿ ಸಂಸ್ಥೆ, ಜಿಲ್ಲಾ ಪ್ರಾಣಿ ದಯಾ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net