

ಚನ್ನಗಿರಿ: ಜೀವನ ಯಾರಿಗೂ ಶಾಶ್ವತವಲ್ಲ. ಇಲ್ಲಿ ಎಲ್ಲರೂ ಬಂದು ಹೋಗುವವರೇ. ಹಾಗಾಗಿ, ಇರುವಷ್ಟು ಕಾಲ ಜನರ ಸೇವೆಗಾಗಿ ಮನಸು ಮೀಸಲಿಡಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಶ್ರೀ ಗುರುಬಸವ ಸ್ವಾಮಿಗಳು ತಿಳಿಸಿದರು.
ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ 849ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಮತ್ತು ಅಂಬಿಗರ ಚೌಡಯ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ನಮ್ಮ ಬಳಿ ಇರುವುದರಲ್ಲಿಯೇ ಸುಖ ಮತ್ತು ನೆಮ್ಮದಿ ಕಾಣಬೇಕು. ಇಲ್ಲದ್ದರ ಕಡೆಗೆ ಮನಸು ನೀಡಿದರೆ ಜೀವನವನ್ನು ದು:ಖದಲ್ಲಿ ಕಳೆಯಬೇಕಾಗುವುದು. ವ್ಯಕ್ತಿ ಕಲ್ಯಾಣ ಮತ್ತು ಸಮಾಜದ ಹಿತ ಸಮನ್ವಯಗೊಳಿಸಿ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದರು.
ಭೌತಿಕ ಸುಖ ಸಂಪತ್ತಿಗೆೆ ಹೆಚ್ಚು ಪ್ರಾಧಾನ್ಯತೆೆ ನೀಡಿ ಸ್ವಾರ್ಥ, ಮೋಸ, ಹಿಂಸೆಯ ಮಾರ್ಗಗಳು ರಾಜಮಾರ್ಗವೆಂದು ಹೋದವರೆಲ್ಲರೂ ನಾಶವಾಗಿದ್ದಾರೆ. ಆದ್ದರಿಂದ ಸಾರ್ಥಕ ಬದುಕು ಕಟ್ಟಕೊಳ್ಳಲು ಶರಣರು ಹಾಕಿಕೊಟ್ಟ ಸನ್ಮಾರ್ಗದ ದಾರಿಯಲ್ಲಿ ನಡೆಯಬೇಕಿದೆ ಎಂದರು.
ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಸರ್ವರಿಗೂ ಲೇಸು ಬಯಸುವ ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿದೆ. ವಚನಗಳನ್ನು ಕೇವಲ ತಿಳಿಯಲು ಓದಬೇಡಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶರಣರಿಗೆ ಗೌರವ ನೀಡಿದಂತಾಗಲಿದೆ ಎಂದು ಹೇಳಿದರು.
ಶಾಸಕನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವೆ. ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ರಾಜಕಾರಣದಲ್ಲಿ ಸಣ್ಣಪುಟ್ಟ ತಪ್ಪುಗಳು ನಡೆಯುತ್ತಿರುತ್ತವೆ. ಅದೆಲ್ಲವನ್ನ್ನು ಮರೆತು ಒಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ಎಂದರು.
ಬೆಂಗಳೂರು ರಾಜಮನೆ ಫೌಂಡೇಷನ್‌ನ ಅಧ್ಯಕ್ಷ ಸನ್ನಿ ಆರ್. ರಾಜಮನೆ ಅವರ ಸಮಾಜಸೇವೆ ಮೆಚ್ಚಿ ಶ್ರೀ ಮಠದಿಂದ ಗೌರವಿಸಲಾಯಿತು.
ಜಗಳೂರು ಶಾಸಕ ದೇವೇಂದ್ರಪ್ಪ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಕಸಾಪ ಮಾಜಿ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಬಸವಶಾಲೆ ನಿರ್ದೇಶಕ ಚಂದ್ರಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾಧ್ಯಕ್ಷ ಕಾಕನೂರು ನಾಗರಾಜ್, ಧನಂಜಯ, ಶಿಕ್ಷಕ ಕೆ.ಎಸ್. ಮಂಜಪ್ಪ, ನಿ.ಶಿಕ್ಷಕ ಎಸ್.ಆರ್. ಕುಮಾರ್ ಇದ್ದರು.