

ಚನ್ನಗಿರಿ: ಪೌಷ್ಟಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ವಿಶ್ವನಾಥ ವಿ. ಮೂಗತಿ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪ್ರಕೃತಿ ದತ್ತವಾಗಿ ಬೆಳೆದ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ. ಆರೋಗ್ಯವಂತ ಶಿಶುವಿನಿಂದ ಆರೋಗ್ಯಕರ ಸಮಾಜ ಕಟ್ಟಬಹುದು. ಹಾಗಾಗಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಅಗತ್ಯ ಎಂದರು.
ಸರ್ಕಾರ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ನೀಡಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಕ್ಕಳ ಆರೋಗ್ಯದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಶ್ಲಾಘನೀಯವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಸಾಮಾಜಿಕ ಜವಾಬ್ದಾರಿ. ಮಕ್ಕಳಿಗೆ ತಾಯಿ ಗರ್ಭದಲ್ಲಿ ಇರುವಾಗಿನಿಂದಲೂ ಮಗು ಹುಟ್ಟುವವರೆಗೆ ಪೌಷ್ಟಿಕ ಆಹಾರ ನೀಡಲು ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ತಾಪಂ ಕಾರ್ಯನಿರ್ವಾಹಣಾಧಿಕಾರಿ ಪಿ.ಕೆ. ಉತ್ತಮ್ ಮಾತನಾಡಿ, ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸಮಗ್ರ ಬೆಳವಣಿಗೆಗೆ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಅವಲಂಬಿಸಿದೆ. ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ತಡೆಯಬೇಕಾದರೆ ಆಹಾರ ಪದ್ಧತಿ ಪಾಲನೆ ಮಾಡಲೇಬೇಕು. ಪ್ರೋಟಿನ್, ಪೋಷಕಾಂಶ ಮತ್ತು ನಾರುಯುಕ್ತ ಸಮತೋಲನ ಆಹಾರದಿಂದ ಆರೋಗ್ಯವಾಗಿ ಬಾಳಬಹುದು. ಹೊರಗಿನ ಅಸುರಕ್ಷಿತ ಆಹಾರ ಸೇವನೆ ದೂರ ಮಾಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಿಡಿಪಿಒ ಆರ್. ನಿರ್ಮಲಾ, ವಕೀಲರ ಸಂಘದ ಉಪಾಧ್ಯಕ್ಷ ಬಾಬುಜಾನ್, ಕಾರ್ಯದರ್ಶಿ ಎಂ.ಎಸ್. ಜಗದೀಶ್ ಇತರರಿದ್ದರು.