

ಚನ್ನಗಿರಿ: ಪ್ರತಿ ಮೂರು ತಿಂಗಳಿಗೊಮ್ಮೆ ಎಂಟು ಕ್ಷೇತ್ರಗಳಲ್ಲಿ ಸಭೆ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಪಟ್ಟಣದ ಜವಳಿ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.
ದಾವಣಗೆರೆ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ತಂಡ ರಚಿಸಿಕೊಂಡು ಲೋಕಸಭಾ ಚುನಾವಣೆ ಎದುರಿಸಿದರೂ ಕಡಿಮೆ ಅಂತರದಿಂದ ಗೆಲುವು ಸಿಕ್ಕಿದೆ. ಇದರಿಂದ ಕಾಂಗ್ರೆಸ್ ಗೆಲುವು ಕಷ್ಟ ಎಂದು ತಿಳಿಯಿತು. ಆದರೂ ಬಿಜೆಪಿ ಭದ್ರಕೋಟೆ ಒಡೆದಿದ್ದೇವೆ ಎಂದು ತಿಳಿಸಿದರು.
ಚುನಾವಣ ಪ್ರಣಾಳಿಕೆ ಪ್ರಕಾರ ನಡೆದುಕೊಳ್ಳಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸಂಸದೆಯಾಗಿ ಕೆಲಸ ಮಾಡುವ ಇಚ್ಛಾಶಕ್ತಿ ನನ್ನಲ್ಲಿದೆ. ಜತೆಗೆ ತಾಳ್ಮೆ ಕೂಡ ಇದೆ. ಪ್ರಾಮಾಣಿಕತೆ ರಕ್ತದಲ್ಲಿ ಇದೆ. ಶಾಮನೂರು ಮನೆತನದ ಸೊಸೆಯಾಗಿ, ನಿಮ್ಮ ಮಗಳಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದರು.
ಸಂಸದೆಯಾದ ಬಳಿಕ ಮೊದಲ ಲೋಕಸಭಾ ಕಲಾಪದಲ್ಲಿ ಹೊಸಪೇಟೆ- ಹರಪನಹಳ್ಳಿ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಏರಿಸುವುದು ಹಾಗೂ ದಾವಣಗೆರೆಯಲ್ಲಿ ಐಟಿ, ಬಿಟಿ ಸ್ಥಾಪನೆ ಬಗ್ಗೆ ಚರ್ಚೆ ಮಾಡಿದ್ದೇನೆ. ಜತೆಗೆ ಸಂಬಂಧಿತ ಕೇಂದ್ರದ ಸಚಿವರ ಬಳಿ ಮಾತುಕತೆ ನಡೆಸಿದ್ದೇನೆ. ವರ್ಷಕ್ಕೆ 5 ಕೋಟಿ ರೂ. ಅನುದಾನ ಬರುತ್ತದೆ. ಯಾವ ಕ್ಷೇತ್ರಕ್ಕೂ ತಾರತಮ್ಯ ಮಾಡದೆ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡುವೆ ಎಂದು ಭರವಸೆ ನೀಡಿದರು.
ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, ಸಂಸದರು ನನ್ನ ಸಹೋದರಿ. ಅನೇಕ ವರ್ಷಗಳಿಂದ ಅವರ ಜತೆಯಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪೂರಕವಾಗಿ ಸ್ಪಂದಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದರು.
ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಜೋಡೆತ್ತುಗಳಿವೆ. ಅಭಿವೃದ್ಧಿ ಕೆಲಸ ಮಾಡುವುದು ಸುಲಭ. ಇಬ್ಬರು ಸೇರಿ ಜನ ಮೆಚ್ಚುವಂಥ ಕೆಲಸ ಮಾಡಬೇಕು ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಹೊದಿಗೆರೆ ರಮೇಶ್, ಅಮಾನುಲ್ಲಾ, ವಡ್ನಾಳ್ ಜಗದೀಶ್, ಪಾಂಡೋಮಟ್ಟಿ ಜಿ.ಆರ್. ಲೋಕೇಶ್ವರಪ್ಪ, ಮರವಂಜಿ ತಿಪ್ಪೇಸ್ವಾಮಿಗೌಡ್ರು, ಸಂತೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಬೀವುಲ್ಲಾ, ಸಿ. ನಾಗರಾಜ್, ದೇವರಹಳ್ಳಿ ನೀಲಪ್ಪ ಇತರರಿದ್ದರು.