ಠಾಣೆ ಎದುರು ಶಾಸಕ ಬಸವರಾಜ ಶಿವಗಂಗಾ ಪ್ರತಿಭಟನೆ

1.jpg
Published on

ಚನ್ನಗಿರಿ : ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಆಡಳಿತ ಪಕ್ಷದ ಶಾಸಕ ಬಸವರಾಜ ಶಿವಗಂಗಾ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಮುಂದೆ ಶನಿವಾರ ಸಂಜೆ ಪ್ರತಿಭಟನೆ ನಡೆಯಿತು.
 ಠಾಣೆಯ ಬಳಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಎಸ್ಪಿ ಬರಬೇಕು ಎಂದು ಪಟ್ಟು ಹಿಡಿದರು. ಶಾಸಕ ಬಸವರಾಜ ಶಿವಗಂಗಾ ಕಾರ್ಯಕರ್ತರೊಂದಿಗೆ ಠಾಣೆಯ ಮುಂದೆ ಕುಳಿತುಕೊಂಡರು.
 ನಮ್ಮದೇ ಸರ್ಕಾರವಿದ್ದರೂ ಕಾರ್ಯಕರ್ತರನ್ನು ಗುರಿಯಾಗಿಸಿ ದ್ವೇಷ ಸಾಧಿಸಲಾಗುತ್ತಿದೆ, ಅವರಿಗೆ ಕಿರುಕುಳ ನೀಡಲಾಗುತ್ತಿದೆ. ರಾಜಕೀಯ ಪ್ರೇರಿತವಾಗಿ ಉದ್ದೇಶಪೂರ್ವಕವಾಗಿ ದೂರು ದಾಖಲಿಸುತ್ತಿದ್ದಾರೆ. ಶಾಸಕರ ಮಾತಿಗೂ ಕಿಮ್ಮತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
 ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಶಿವಗಂಗಾ, ಕ್ಷೇತ್ರದಲ್ಲಿ ನನ್ನ ಕಾರ್ಯಕರ್ತರ ಹಿತ ರಕ್ಷಣೆ ನನಗೆ ಮುಖ್ಯ. ನಾನು ದೂರವಾಣಿ ಕರೆ ಮಾಡಿದರೂ ಪೊಲೀಸರು ಸ್ಪಂದಿಸುತ್ತಿಲ್ಲ. ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಪಿಎಸ್‌ಐ ಅವರನ್ನು ಅಮಾನತುಗೊಳಿಸಿ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net