ಪ್ರತಿ ಪಂಚಾಯಿತಿಗೆ 20 ಮನೆ ಮಂಜೂರು

chn oct 06 mla meeting. (2)
Published on

ಚನ್ನಗಿರಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ ಆಶ್ರಯ ಯೋಜನೆಯಡಿ ತಲಾ 20 ಮನೆಗಳು ಮಂಜೂರಾಗಿವೆ ಎಂದು ಶಾಸಕ ಹಾಗೂ ಕೆಎಎಲ್‌ಡಿಎಲ್ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಪಿಡಿಒಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮನೆ ಹಂಚಿಕೆಯಲ್ಲಿ ತಾರತಮ್ಯ ಆಗಬಾರದು. ಪಂಚಾಯಿತಿಗೆ ಬಂದಿರುವ ಅರ್ಜಿಗಳನ್ನು ಪಟ್ಟಿ ಅರ್ಜಿ ಪರಿಶೀಲಿಸಿ ಅರ್ಹರಿಗೆ ಮನೆ ಹಂಚಿಕೆ ಮಾಡಬೇಕು. ಕಳೆದ ಸಾಲಿನ ಕೆಲ ಫಲಾನುಭವಿಗಳಿಗೆ ತಮ್ಮ ನಿವೇಶನ ಜಿಪಿಎಸ್‌ನಲ್ಲಿ ಅಳವಡಿಸಿದ್ದರೂ, ಮನೆ ಮಂಜೂರು ಆಗಿರುವುದಿಲ್ಲ. ಇಂಥವರಿಗೆ ಮೊದಲ ಆದ್ಯತೆ ನೀಡಬೇಕು. ನಂತರ ತಾಲೂಕಿನಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಅರ್ಹರನ್ನು ಗುರುತಿಸಿ ಮನೆ ಕೊಡುವ ಕೆಲಸವಾಗಬೇಕೆಂದು ಪಿಡಿಒಗಳಿಗೆ ಸೂಚಿಸಿದರು.

ವಸತಿ ಸಚಿವರಲ್ಲಿ ಹೆಚ್ಚಿನ ಮನೆ ನೀಡುವಂತೆ ಮನವಿ ಮಾಡಿದ ಮೇರೆಗೆ ಪ್ರತಿ ಗ್ರಾಮಕ್ಕೆ 10 ಮನೆಗಳನ್ನು ಸಾಮಾನ್ಯ ವರ್ಗದವರಿಗೆ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ವರ್ಗದವರಿಂದಲೂ ಅರ್ಜಿ ಪಡೆಯಬೇಕೆಂದು ತಿಳಿಸಿದರು.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2019-20ನೇ ಸಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಾದ ಮರವಂಜಿ, ಕಾಶೀಪುರ, ಅರಿಶಿನಘಟ್ಟ, ಬೆಂಕಿಕೆರೆ, ಬಿಡುಗೊಂಡನಹಳ್ಳಿ, ಮಾದೇನಹಳ್ಳಿ, ಮಾವಿನಕಟ್ಟೆ, ರಾಜಗೊಂಡನಹಳ್ಳಿ ಅಭಿವೃದ್ಧಿಗಾಗಿ ತಲಾ 40 ಲಕ್ಷ ರೂ. ಮಂಜೂರಾಗಿದೆ. ಈ ಅನುದಾನದಲ್ಲಿ ಅಂಗನವಾಡಿ ಕಟ್ಟಡ, ಶಾಲಾ ಕೊಠಡಿ, ಗ್ರಾಮದ ಸ್ವಚ್ಛತೆ ಇನ್ನಿತರ ಕೆಲಸ ಮಾಡಲು ಅವಕಾಶವಿದೆ. ಈ ಕುರಿತು ಸಂಬಂಧಿಸಿದ ಪಿಡಿಒಗಳು ಕ್ರಿಯಾಯೋಜನೆ ರೂಪಿಸಿಕೊಡಬೇಕು. ಬಂದ ಅನುದಾನ ಸಮರ್ಪಕವಾಗಿ ಬಳಕೆಯಾದರೆ 2020-21ನೇ ಸಾಲಿಗೆ ಮತ್ತೆ ಎಂಟು ಪಂಚಾಯಿತಿಗಳಿಗೂ ಹಣ ಬರಲಿದೆ ಎಂದರು.

ಶುದ್ಧ ನೀರಿನ ಘಟಕವನ್ನು ಪ್ರತಿ ಗ್ರಾಮಗಳಿಗೆ ಒದಗಿಸಲಾಗಿದೆ. ಈ ಕುರಿತು ಗ್ರಾಮಸ್ಥರು ಅಧಿಕಾರಿಗಳ ಬದಲು ನನಗೆ ಕರೆಮಾಡಿ ದೂರು ಹೇಳುತ್ತಾರೆ. ಇನ್ನು ಮುಂದೆ ಹೀಗಾಗಬಾರದು. ಘಟಕಗಳು ಸದಾ ಸುಸ್ಥಿತಿಯಲ್ಲಿರುವಂತೆ ಪಿಡಿಒ ಮತ್ತು ಸಂಬಂಧಿಸಿದವರು ನೋಡಿಕೊಳ್ಳಬೇಕೆಂದು ಸೂಚಿಸಿದರು.

ತಾಲೂಕಿನ ಎಂಟು ಗ್ರಾಮಗಳಲ್ಲಿ ಸ್ವಾಮಿತ್ವ ಯೋಜನೆಯಡಿ ಸರ್ವೆಕಾರ್ಯ ನಡೆಯುತ್ತಿದೆ. ಈ ವೇಳೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಜನರಿಗೆ ತಮ್ಮ ಆಸ್ತಿಯ ಬಗ್ಗೆ ತಪ್ಪು ಮಾಹಿತಿ ನೀಡುವ ಕೆಲಸ ಆಗಬಾರದು. ಮುಂದಿನ ದಿನದಲ್ಲಿ ನಾನು ಪ್ರತಿ ಗ್ರಾಪಂ ಅಧಿಕಾರಿಗಳ ಜತೆ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಆಗೇನಾದರೂ ತಪ್ಪು ಮಾಡಿದ್ದು ತಿಳಿದರೆ ಕಠಿಣಕ್ರಮ ತೆಗೆದುಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು.

ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಇದರ ತಡೆಗೆ ಸಾರ್ವಜನಿಕರು ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಶುದ್ಧ ಕುಡಿವ ನೀರು ಒದಗಿಸಬೇಕು. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಯಾವ ಗ್ರಾಮದಲ್ಲಿ ಕರೊನಾದಿಂದ ಮೃತರಾದರೆ ಆ ಹಳ್ಳಿಗೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂದು ತಿಳಿಸಿದರು.

ಸಭೆಯಲ್ಲಿ ತಾಪಂ ಇಒ ಎಂ.ಆರ್.ಪ್ರಕಾಶ್, ಸಮಾಜಕಲ್ಯಾಣ ಇಲಾಖೆ ತಾಲೂಕು ನಿರ್ದೇಶಕ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net