ಚನ್ನಗಿರಿ: ಅಡಕೆ ತೋಟದಲ್ಲಿ ಆರು ತಿಂಗಳ ಚಿರತೆ ರಕ್ಷಣೆ

chn1
Published on

ಚನ್ನಗಿರಿ:  ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬಸವಾಪಟ್ಟಣ ಹೋಬಳಿಯ ವೈಲಿಪುರ ಗ್ರಾಮದ ಅಡಕೆ ತೋಟವೊಂದರಲ್ಲಿ ಆಹಾರ ಅರಸಿ ಬಂದಿದ್ದ ಆರು ತಿಂಗಳ ವಯಸ್ಸಿನ ಚಿರತೆಯೊಂದು ತಂತಿ ಬೇಲಿಗೆ ಸಿಕ್ಕಿ ಒದ್ದಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಆದರೆ, ಅರಣ್ಯ ಇಲಾಖೆಯ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ, ಕಾಡಿಗೆ ಮರಳಿ ಬಿಡಲಾಗಿದೆ.

ಗ್ರಾಮದ ಬಳಿಯ ಅಡಕೆ ತೋಟವೊಂದರಲ್ಲಿ ರಾತ್ರಿ ವೇಳೆ ಜೋರಾಗಿ ಪ್ರಾಣಿಯೊಂದು ಚೀರುತ್ತಿರುವ ಶಬ್ದ ಕೇಳಿಬಂದಿದೆ. ಆರಂಭದಲ್ಲಿ ತೋಟದ ಮಾಲೀಕರು ಮತ್ತು ಕೂಲಿ ಕಾರ್ಮಿಕರು ಈ ಶಬ್ದವನ್ನು ನಿರ್ಲಕ್ಷಿಸಿದ್ದಾರೆ. ಆದರೆ, ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ಕಡೆ ಶಬ್ದ ನಿರಂತರವಾಗಿ ಕೇಳಿಬಂದಾಗ, ಸಂದೇಹಗೊಂಡ ಜನರು ಧೈರ್ಯ ಮಾಡಿ ಸ್ಥಳಕ್ಕೆ ತೆರಳಿದ್ದಾರೆ.

ಆಗ, ತಂತಿ ಬೇಲಿಯಲ್ಲಿ ಸಿಕ್ಕಿಕೊಂಡು ನರಳುತ್ತಿದ್ದ ಚಿರತೆಯ ದೃಶ್ಯ ಅವರಿಗೆ ಗೋಚರಿಸಿದೆ. ತಕ್ಷಣ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿಯ ಆಧಾರದ ಮೇಲೆ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಎಂ. ಉಷಾ ಅವರ ನೇತೃತ್ವದಲ್ಲಿ ಸಿಬ್ಬಂದಿಯಾದ ಮನೋಹರ, ಶಿವಶಂಕರ್, ನಯಾಜ್, ರಂಗಪ್ಪ ಮತ್ತು ಅನಿಲ್ ಸ್ಥಳಕ್ಕೆ ಧಾವಿಸಿದ್ದಾರೆ.

ಬಳಿಕ, ಚಿರತೆಗೆ ಯಾವುದೇ ಗಾಯವಾಗದಂತೆ ಎಚ್ಚರಿಕೆಯಿಂದ ಅದನ್ನು ತಂತಿ ಬೇಲಿಯಿಂದ ಬಿಡಿಸಿದ್ದಾರೆ. ಪಶುವೈದ್ಯರ ಪರಿಶೀಲನೆ ನಂತರ, ಚಿರತೆ ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿಕೊಂಡು ಅದನ್ನು ಸುರಕ್ಷಿತವಾಗಿ ಮತ್ತೆ ಅರಣ್ಯಕ್ಕೆ ಬಿಡಲಾಯಿತು.

ಈ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಮಾನವ ಮತ್ತು ವನ್ಯಜೀವಿ ಸಂಘರ್ಷದ ಕುರಿತು ಮತ್ತೊಮ್ಮೆ ಗಂಭೀರ ಚಿಂತನೆಗೆ ಹಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net