ಬೆಂಬಲಬೆಲೆಯಡಿ ರೈತರ ಉತ್ಪನ್ನ ಖರೀದಿ

chn nov 11 JANASPANDANA (1)
Published on

ಚನ್ನಗಿರಿ: ಮೆಕ್ಕೆಜೋಳ, ಭತ್ತ, ಹೂವು, ಹಣ್ಣು, ತರಕಾರಿಯನ್ನು ಬೆಂಬಲಬೆಲೆಯಡಿ ಖರೀದಿಸಲು ಮುಖ್ಯಮಂತ್ರಿಗಳ ಜತೆ ಈಗಾಗಲೇ ಚರ್ಚಿಸಲಾಗಿದ್ದು ಇದಕ್ಕೆ ಶೀಘ್ರವೇ ಸಮ್ಮತಿ ದೊರೆಯಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ತಿಳಿಸಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಸ್ಪಂದನ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತಿತರೆಡೆ ಉತ್ತಮ ಮಳೆಯಾಗಿದೆ. ಮೆಕ್ಕೆಜೋಳದ ಇಳುವರಿ ಅಧಿಕವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಟಾಸ್ಕ್‌ಫೋರ್ಸ್ ಮಾಡುವ ಮೂಲಕ ಬೆಂಬಲ ನೀಡಲಾಗುತ್ತದೆ. ಈಗಾಗಲೇ ಹೂವು, ಹಣ್ಣು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು.

ಸಚಿವನಾಗಿ 25 ಬಾರಿ ಜಿಲ್ಲೆಗೆ ಭೇಟಿ ನೀಡಿ ಅನೇಕ ಸಭೆಗಳನ್ನು ನಡೆಸಿದ್ದೇನೆ. ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ವಿಶೇಷ ಗಮನ ಹರಿಸಿದ್ದಾರೆ. ತಾಲೂಕಿನ ಎಲ್ಲ ಗ್ರಾಮಗಳಿಗೂ ಸೂಳೆಕೆರೆಯಿಂದ ಕುಡಿವ ನೀರು ನೀಡಲಾಗುತ್ತಿದೆ. ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಮಂಜೂರಾಗಿದ್ದು, ಶೀಘ್ರವೇ ಗುದ್ದಲಿಪೂಜೆ ನೆರವೇರಿಸಲಾಗುತ್ತದೆ. ರಸ್ತೆ, ವಿದ್ಯುತ್ ದೀಪ ಅಳವಡಿಕೆ ಸೇರಿ ಎಲ್ಲ ಅನುಕೂಲತೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕರೊನಾ ಇಳಿಮುಖವಾಗುತ್ತಿದೆ. ಪ್ರತಿ ದಿನ 2500 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, 50ರೊಳಗೆ ಪಾಸಿಟಿವ್ ಬರುತ್ತಿವೆ. ಶನಿವಾರ 29 ಪ್ರಕರಣ ಬಂದಿವೆ ಎಂದು ಮಾಹಿತಿ ನೀಡಿದರು.

ದೀಪಾವಳಿ ಹಬ್ಬವನ್ನು ಮನೆ ಮುಂದೆ ದೀಪ ಹಚ್ಚುವ ಮೂಲಕ ಆಚರಿಸಬೇಕು. ರಾಜ್ಯ ಸರ್ಕಾರದ ಆದೇಶ ಮೀರಿ ಯಾರೂ ಪಟಾಕಿ ಹೊಡೆಯಬಾರದು ಎಂದು ಮನವಿ ಮಾಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೇಂದ್ರ ಸರ್ಕಾರ 2023ರ ವೇಳೆಗೆ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಿ, ನೀರೊದಗಿಸಲು ಯೋಜನೆ ಸಿದ್ಧಪಡಿಸಿದೆ. 5 ಕೋಟಿ ಜನರಿಗೆ ಮನೆಗಳನ್ನು ನೀಡಲು ತಯಾರಿ ಮಾಡಿಕೊಂಡಿದೆ. ಆರ್ಥಿಕವಾಗಿ ರೈತರು ಸಬಲರಾಗಲು ಸಾಯಿಲ್ ಹೆಲ್ತ್ ಕಾರ್ಡ್, ಜೀನ್ಸ್‌ಕೋಟೆಡ್ ಯೂರಿಯಾ ಸೇರಿದಂತೆ ಹಲವು ಯೋಜನೆ ನೀಡಿದೆ. ಮೋದಿಯವರೇ ಇನ್ನೂ 10 ವರ್ಷ ಪ್ರಧಾನಿಯಾಗಿ ಮುಂದುವರಿದರೆ ದೇಶದ ಚಿತ್ರಣವೇ ಬದಲಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪನವರು ಕೃಷಿ ಸನ್ಮಾನ್ ಯೋಜನೆಯಡಿ ಪ್ರತಿ ರೈತರಿಗೆ 4 ಸಾವಿರ ಸಹಾಯಧನ ನೀಡಿದ್ದಾರೆ. ಮಡಿವಾಳರು, ಆಟೋ ಚಾಲಕರು, ಸವಿತಾ ಸಮಾಜ ಹಾಗೂ ಪ್ರತಿ ದಿನ ದುಡಿದು ಜೀವಿಸುವವರಿಗಾಗಿ 2.5 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಬಿಹಾರ ಚುನಾವಣೆ ಸಮೀಕ್ಷೆ ತಪ್ಪಾಗಿದೆ. ರಾಜ್ಯದ ವಿಧಾನ ಪರಿಷತ್ ಮತ್ತು ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಮೋದಿ ಅವರನ್ನು ಉತ್ತಮ ನಾಯಕ ಎಂದು ಒಪ್ಪಿದ್ದಾರೆ. ಯಡಿಯೂರಪ್ಪ ಅವರೂ ಅವಧಿ ಮುಗಿಯುವವರೆಗೆ ಸಿಎಂ ಆಗಿ ಮುಂದುವರಿಯುತ್ತಾರೆ. ಮುಂದಿನ ದಿನಗಳಲ್ಲಿ ಅವರ ನಾಯಕತ್ವದಲ್ಲಿ ಚುನಾವಣೆ ನಡೆದರೆ ಮತ್ತೆ ರಾಜ್ಯದ ಅಧಿಕಾರವನ್ನು ಹಿಡಿಯಬಹುದಾಗಿದೆ ಎಂದರು.

ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ 7.5 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಮಾಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಕೆಎಸ್‌ಡಿಎಲ್, ಸಿಎಸ್‌ಆರ್ ಯೋಜನೆಯಡಿ 2.30 ಕೋಟಿ ಮಂಜೂರಾತಿ ಪಡೆದು ಅಂಗನವಾಡಿ ಕೇಂದ್ರ ಹಾಗೂ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತೇ ಇಲ್ಲ. ಯಡಿಯೂರಪ್ಪ, ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದುಕೊಂಡೇ ಅಭಿವೃದ್ಧಿ ಪರ್ವ ಮುಂದುವರಿಸಲಿದ್ದಾರೆ ಎಂದರು.

ಮಾಯಕೊಂಡ ಶಾಸಕ ಪ್ರೊ.ನಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಉಪಾಧ್ಯಕ್ಷೆ ಸಾಕಮ್ಮ, ತಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಚಂದ್ರಮ್ಮ, ಎಸ್‌ಪಿ ಹನುಮಂತರಾಯ, ಜಿಪಂ ಸಿಇಒ ಪದ್ಮಾ, ತಹಸೀಲ್ದಾರ್ ಪಟ್ಟರಾಜಗೌಡ, ಎಸಿ ಮಮತಾ ಹೊಸಗೌಡರ್, ತಾಪಂ ಇಒ ಜಿ.ಆರ್. ಪ್ರಕಾಶ್ ಉಪಸ್ಥಿತರಿದ್ದರು.

ವಿವಿಧ ಸೌಲಭ್ಯಗಳ ವಿತರಣೆ: ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ 202 ಫಲಾನುಭವಿಗಳು, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ 312, ನಿರ್ಗತಿಕ ವಿಧವಾ ವೇತನ 35, ಅಂಗವಿಕಲ ವೇತನ 35, ಮನಸ್ವಿನಿ 10, ಹೊಸದಾಗಿ ಮಂಜೂರಾದ ನ್ಯಾಯಬೆಲೆ ಅಂಗಡಿ 3, ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಪ್ರಕರಣ 3, ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ 3, ರಾಷ್ಟ್ರೀಯ ಸುಸ್ಥಿರ ಮಳೆಯಾಶ್ರಿತ ಅಭಿವೃದ್ಧಿ ಯೋಜನೆಯಡಿ 63, ಸಮುದಾಯ ಕೃಷಿ ಹೊಂಡ 33, ಭಾಗ್ಯಲಕ್ಷ್ಮಿ ಬಾಂಡ್ 50, ಮೇವು ಕತ್ತರಿಸುವ ಯಂತ್ರ 8, ಮೀನುಗಾರಿಕೆ ಸಲಕರಣೆ ಕಿಟ್ 6, ಉದ್ಯಮ ಶೀಲತಾ ಹಾಗೂ ವಿವಿಧ ಯೋಜನೆಯಡಿ 14 ಫಲಾನುಭವಿಗಳು ಹಾಗೂ ಅಂತರ್ಜಾತಿ ವಿವಾಹವಾದ ಐದು ಜೋಡಿಗಳಿಗೆ ಧನ ಸಹಾಯ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net