ಚನ್ನಗಿರಿಯ ಚಿಕ್ಕೂಲಿಕೆರೆ ಬಳಿ ಬಡಾವಣೆ ನಿರ್ಮಾಣ

Channagiri, Karnataka Home House, Construction, Meeting,
Published on

ಚನ್ನಗಿರಿ: ತಾಲೂಕಿನ ಚಿಕ್ಕೂಲಿಕೆರೆ ಗ್ರಾಮ ಬಳಿ ಕರ್ನಾಟಕ ಗೃಹ ಮಂಡಳಿಗೆ ಸೇರಿದ 92 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲಾಗುವುದು. ರೈತರು ಸಹಕಾರ ನೀಡಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದ ವಿಠಲ ರುಕುಮಾಯಿ ಕಲ್ಯಾಣ ಮಂದಿರದಲ್ಲಿ ಕರ್ನಾಟಕ ಗೃಹ ಮಂಡಳಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಎಚ್‌ಬಿ ವತಿಯಿಂದ ಮನೆ ನಿರ್ಮಿಸಲು 92 ಎಕರೆ ಜಮೀನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ. ನಿವೇಶನ ರಚಿಸಿ ನೀಡಲು 1999ರಲ್ಲಿ ಅರ್ಜಿ ಕರೆಯಲಾಗಿತ್ತು. 1300 ಅರ್ಜಿಗಳು ಬಂದಿದ್ದವು. ಆದರೆ, ತಾಂತ್ರಿಕ ತೊಂದರೆಯಿಂದ ಲೇಔಟ್ ಮಾಡುವುದು ನಿಂತು ಹೋಗಿತ್ತು.

2020 ಮಾರ್ಚ್ 13ರಂದು ವಿಕಾಸಸೌಧದಲ್ಲಿ ಕರೆದಿದ್ದ ವಸತಿ ಸಚಿವರ ಸಭೆಯಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಶೇ. 60 ಗೃಹ ಮಂಡಳಿಗೆ ಹಾಗೂ ಶೇ. 40 ರೈತರಿಗೆ ನಿವೇಶನ ಮಾಡಿಕೊಡುವ ಬಗ್ಗೆ ನಿರ್ಧರಿಸಲಾಗಿದೆ. ಅದರಂತೆ ಸರ್ಕಾರ ನಡೆದುಕೊಳ್ಳಲು ಸಿದ್ಧವಾಗಿದೆ. ರೈತರು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಶೇ. 60ರಷ್ಟು ಜಾಗದಲ್ಲಿ ಲೇಔಟ್ ನಿರ್ಮಿಸಲು ಸರ್ಕಾರದಿಂದ 42 ಕೋಟಿ ರೂ. ಅನುದಾನ ಮಂಜೂರು ಆಗಿದೆ. ದೇವಾಲಯ, ಪಾರ್ಕ್, ನೀರು, ಒಳಚರಂಡಿ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲಾಗುವುದು. ಜಮೀನು ನೀಡಿದ ರೈತರು ಅರ್ಜಿ ಸಲ್ಲಿಸಿದ್ದರೆ ಆದ್ಯತೆ ನೀಡಿ, ನಂತರ ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ಮಾತನಾಡಿ, ಮುಂದಿನ ದಿನದಲ್ಲಿ ಪಟ್ಟಣಕ್ಕೆ ಹತ್ತಿರ ಇರುವ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳುವುದನ್ನು ಸರ್ಕಾರ ಕೈಬಿಡಬೇಕು. ಜಮೀನು ನೀಡಿದ ರೈತರಿಗೆ ಎಲ್ಲ ರೀತಿಯ ಅವಕಾಶವನ್ನು ಆದ್ಯತೆ ಮೇರೆಗೆ ನೀಡಬೇಕು ಎಂದು ತಿಳಿಸಿದರು. ಕರ್ನಾಟಕ ಗೃಹಮಂಡಳಿ ಸಹಾಯಕ ಇಂಜಿನಿಯರ್ ಸುದೀಪ್, ಇಇ ಶರಣಪ್ಪ, ಸಹಾಯಕ ಇಂಜಿನಿಯರ್ ಆಶಾ, ಮುಖಂಡರಾದ ಅಮನುಲ್ಲಾ, ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net