

ಚನ್ನಗಿರಿ: ಮನೆಯಲ್ಲಿ ಮಾತೃಭಾಷೆ ಕನ್ನಡ ಬಳಸಿದರೆ ಅದು ತಾನಾಗಿಯೇ ಉಳಿಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ತಿಳಿಸಿದರು.
ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಅಂಗಳದಲ್ಲಿ ನುಡಿ ತೋರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡು, ನುಡಿ ಉಳಿವಿಗೆ ನವಂಬರ್‌ನಲ್ಲಿ ಮಾತ್ರ ಕಾರ್ಯ ಕ್ರಮ ಆಯೋಜಿಸಿದರೆ ಸಾಲದು. ವರ್ಷದ ಎಲ್ಲ ದಿನಗಳಲ್ಲಿ ಕನ್ನಡ ಹಬ್ಬ ನಡೆಯಬೇಕು. ಮನೆ, ಮನಗಳಲ್ಲಿ ಕನ್ನಡ ಬೆಳಗಬೇಕು ಎಂದು ಆಶಿಸಿದರು.
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಸಿದಾಗ ಭಾಷೆ ಉಳಿಯಲು ಸಾಧ್ಯ. ಕನ್ನಡ ಮಾತನಾಡಿದರೆ ಅವಮಾನ ಆಂಗ್ಲಭಾಷೆ ಕಲಿತು ಮಾತನಾಡಿದರೆ ಗೌರವ ಎಂಬ ಭಾವನೆಯಿಂದ ಹೊರಬರಬೇಕು ಎಂದರು.
ಉಪನ್ಯಾಸಕ ಎಚ್.ಎಂ.ಬಸವರಾಜಪ್ಪ ಮಾತನಾಡಿ, ಪ್ರತಿ ಮನೆ ಯಲ್ಲೂ ಕನ್ನಡದ ದೀಪ ಬೆಳಗುವ ಕೆಲಸ ಪ್ರಾರಂಭವಾಗಬೇಕು. ವ್ಯವಹಾರಕ್ಕಾಗಿ ಪರಭಾಷೆ ಕಲಿಕೆ ತಪ್ಪಲ್ಲ ಎಂದು ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಜಿ.ಮಧು ಕುಮಾರ್ ಮಾತನಾಡಿ, ಪ್ರೌಢಶಾಲಾ ಹಂತದಲ್ಲಿ ಚನ್ನಗಿರಿ ತಾಲೂಕಿನ ಶಾಲೆಗಳಲ್ಲಿ ನುಡಿ ತೋರಣ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕನ್ನಡ ಕಂಪು ಪಸರಿಸುವ ಕೆಲಸ ಪ್ರಾರಂಭವಾಗಿದೆ.ಕನ್ನಡದಲ್ಲೂ ಉನ್ನತ ವ್ಯಾಸಂಗಕ್ಕೆ ಅವಕಾಶವಿದೆ ಎಂದರು.
ಉಪ ಪ್ರಾಚಾರ್ಯ ಲೋಹಿತಾಶ್ವ, ಕ.ಸಾ.ಪ ಕಾರ್ಯದರ್ಶಿ ಪಿ.ಚಿನ್ನಸ್ವಾಮಿ, ಕನ್ನಡ ಶಿಕ್ಷಕ ನಾಗೇಶ ನಾಯ್ಕ, ಸಿದ್ದೇಶ, ತಿಪ್ಪೇಶಪ್ಪ ಇತರರಿದ್ದರು. ಕನ್ನಡ ಸಾಹಿತ್ಯ ಪರಿಷತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕನ್ನಡ ಭಾಷಾ ಬಳಗದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.