

ಚನ್ನಗಿರಿ: ಜೀವನದಲ್ಲಿ ಅನ್ಯೋನ್ಯತೆಯಿಂದ ಇದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ !
ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಹನುಮಂತಪ್ಪ-ಜಯಮ್ಮ ದಂಪತಿ ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 82 ವರ್ಷದ ಜಯಮ್ಮ ಶನಿವಾರ ರಾತ್ರಿ ಮೃತಪಟ್ಟರೆ, ಪತಿ 98 ವರ್ಷದ ಹನುಮಂತಪ್ಪ ಭಾನುವಾರ ಬೆಳ್ಳಂಬೆಳಗ್ಗೆ ನಿಧನ ಹೊಂದಿದ್ದಾರೆ.
ಶನಿವಾರ ರಾತ್ರಿ ಪತ್ನಿ ಜಯಮ್ಮಳ ಅಗಲಿಕೆ ವಿಷಯ ತಿಳಿದ ಪತಿ ಹನುಮಂತಪ್ಪ ತೀವ್ರ ಮನನೊಂದಿದ್ದರು. ಭಾನುವಾರ ಬೆಳಗ್ಗೆ ಚಿರಡೋಣಿ ಗ್ರಾಮದ ಸ್ವಂತ ತೋಟದಲ್ಲಿ ಪತ್ನಿ ಅಂತ್ಯಕ್ರಿಯೆಗೆ ಸಿದ್ದತೆ ನಡೆದಿತ್ತು. ಅಷ್ಟರಲ್ಲಾಗಲೇ ಪತಿ ಹನುಮಂತಪ್ಪ ಸಹ ಕೊನೆಯುಸಿರೆಳೆದರು.
ಕೊನೆಗೆ ಕುಟುಂಬದವರು ನಿರ್ಧರಿಸಿದಂತೆ ಭಾನುವಾರ ಬೆಳಗ್ಗೆ ತೋಟದಲ್ಲೇ ಇಬ್ಬರ ಅಂತ್ಯಕ್ರಿಯೆ ನಡೆಸಲಾಯಿತು. ದಂಪತಿಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.