

ಚನ್ನಗಿರಿ: ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಆದೇಶ ಮಾಡಬೇಕು ಎಂದು ಅಖಿಲ ಕರ್ನಾಟಕ ಮಾದಿಗ ಸಮಾಜದ ಪದಾಧಿಕಾರಿಗಳು ಶುಕ್ರವಾರ ತಮಟೆ ಚಳವಳಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪದಾಧಿಕಾರಿಗಳು, ಗಣಪತಿ ವೃತ್ತದ ಮೂಲಕ ಕಲ್ಲುಸಾಗರ ರಸ್ತೆ, ಗಣಪತಿ ವೃತ್ತ, ಕಾಲೇಜು ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ರುಕ್ಮಿಣಿಬಾಯಿ ಅವರಿಗೆ ಮನವಿ ಸಲ್ಲಿಸಿದರು.
ಸಮಾಜದ ತಾಲೂಕು ಅಧ್ಯಕ್ಷ ಹಿರೇಕೋಗಲೂರು ಎಚ್.ಪ್ರಕಾಶ್ ಮಾತನಾಡಿ, ಸುಪ್ರೀಂ ಕೋರ್ಟ್ ಏಳು ನ್ಯಾಯಾಧೀಶರ ಪೀಠವು ಪರಿಶಿಷ್ಟ ಜಾತಿಗೆ ಒಳಮೀಸಲು ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ನೀಡಿದ ತೀರ್ಪು ಚರ್ಚೆಗೆ ಒಳಗಾಗಿದೆ. 3 ದಶಕಗಳಿಂದ ನಡೆದ ಒಳಮೀಸಲು ಹೋರಾಟಕ್ಕೆ ತಾರ್ಕಿಕ ಪರಿಹಾರ ನೀಡಿದೆ ಎಂದು ಹೇಳಿದರು.
ಮೀಸಲಾತಿ ಜಾರಿಗೆ ತರುವುದು ಈಗ ರಾಜ್ಯ ಸರ್ಕಾರದ ಸರದಿಯಾಗಿದೆ. ಕೂಡಲೇ ಒಳಮೀಸಲು ಜಾರಿಗೆ ತರಬೇಕು. 75 ವರ್ಷಗಳಲ್ಲಿ ವಿತರಿಸಲಾದ ಮೀಸಲಾತಿಯ ಅಸಮಾನತೆ ಸರಿಪಡಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಶಯವನ್ನು ನನಸಾಗಿಸಬೇಕು. ಚಳವಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಪ್ರತಿಭಟನೆಯಲ್ಲಿ ಮಾದಿಗ ಸಮಾಜದ ಗೌರವ ಅಧ್ಯಕ್ಷ ಮಾಚನಾಯಕನಹಳ್ಳಿ ಬಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ದೀಪಕ್‌ಕುಮಾರ್, ಉಪಾಧ್ಯಕ್ಷರಾದ ರಂಗಪ್ಪ, ರಾಜಪ್ಪ ಆರ್.ಜಿ.ಹಳ್ಳಿ, ಚಂದ್ರಪ್ಪ ಜೋಳದಾಳು, ಚಿಕ್ಕೊಲಿಕೆರೆ ಮಹೇಶ್ವರಪ್ಪ, ಖಜಾಂಚಿ ನವಿಲೇಹಾಳು ಕೃಷ್ಣಪ್ಪ, ಸಹಕಾರ್ಯದರ್ಶಿ ಮಧು ಬೆಳ್ಳಿಗನೂಡು, ಸಿದ್ದೇಶ್ ಈರಗನಹಳ್ಳಿ, ಮಲ್ಲಿಕಾರ್ಜುನ್ ನಲ್ಲೂರು, ದೇವೇಂದ್ರಪ್ಪ ಕರೇಕಟ್ಟೆ ಇತರರಿದ್ದರು.