ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಪ್ರತಿಭಟನೆ

Channagiri, Illegal, Liquor, Sale,
Published on

ಚನ್ನಗಿರಿ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿರುವುದರಿಂದ ಗಂಡಸರು, ಮಕ್ಕಳು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಅಬಕಾರಿ ಇಲಾಖೆ ಎದುರು ತಾಲೂಕಿನ ಚಿಕ್ಕೂಲಿಕೆರೆ ಗ್ರಾಮಸ್ಥರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮಹಿಳೆ ಲಕ್ಷ್ಮಮ್ಮ, ಸರ್ಕಾರದ ಪರವಾನಗಿ ಪಡೆಯದೆ ಗ್ರಾಮದಲ್ಲಿ ಚನ್ನಗಿರಿಯ ಮದ್ಯದಂಗಡಿಗಳಿಂದ ಮದ್ಯ ಖರೀದಿಸಿ ತಂದು ಅಕ್ರಮವಾಗಿ ಮಾರಾಟ ಮಾಡುತ್ತಾರೆ. ಈ ಕುರಿತು ಅನೇಕ ಬಾರಿ ಅಬಕಾರಿ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ದಲಿತ ಕೇರಿಯಲ್ಲಿ ಹಗಲು ರಾತ್ರಿ ಎನ್ನದೆ ಮದ್ಯ ಮಾರಾಟ ಮಾಡಲಾಗುತ್ತಿದೆ. ತಿಂಗಳ ಹಿಂದೆಯಷ್ಟೆ ಅಕ್ರಮ ಮದ್ಯ ಮಾರಾಟ ಮಾಡುವ ಒಬ್ಬನ ಮೇಲೆ ಪ್ರಕರಣ ದಾಖಲಾಗಿದೆ. ಅದರೂ ಮಾರಾಟ ನಿಲ್ಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ದಲಿತ ಕುಟುಂಬಗಳಿವೆ. ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಜೀವನ ನಡೆಯಬೇಕು. ಗಂಡಸರು ಕೂಲಿ ಹಣದಲ್ಲಿ ಮದ್ಯ ಸೇವಿಸಿ ಮನೆಗೆ ಖಾಲಿ ಕೈಯಲ್ಲಿ ಬರುತ್ತಾರೆ. ಇದರಿಂದ ಮನೆಯಲ್ಲಿ ಹೆಂಡತಿ, ಮಕ್ಕಳು ಉಪವಾಸ ಇರಬೇಕಾಗಿದೆ ಎಂದು ಅಳಲು ತೋಡಿಕೊಂಡರು.

ಯುವಕರು ಕುಡಿದು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಗ್ರಾಮದವರು ಖಾಸಗಿಯವರಿಗೆ ವರ್ಷಕ್ಕೆ ಟೆಂಡರ್ ಹರಾಜು ಮಾಡುವ ರೀತಿ ಹಣ ಪಡೆದು ಮಾರಾಟ ಮಾಡಲು ಅವಕಾಶ ನೀಡಿದ್ದಾರೆ ಎಂದು ದೂರಿದರು.

ಇಲಾಖೆಯವರು ಸಹ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ದೂರುಗಳು ಬಂದ ಸಮಯದಲ್ಲಿ ಮಾರಾಟ ಮಾಡುವ ಮನೆಗೆ ಹೋಗಿ ಮೌಖಿಕವಾಗಿ ಅದೇಶ ಮಾಡಿ ಎಚ್ಚರಿಸಿ ಹೋಗುತ್ತಾರೆ. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಮಾರಾಟ ಸಾಗುತ್ತದೆ. ಆದ್ದರಿಂದ ಈ ಕೂಡಲೇ ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ರೇಖಮ್ಮ, ಕುಕ್ಕವಾಡಮ್ಮ, ಪ್ರೇಮಾ, ತುಳಜಮ್ಮ, ದುರ್ಗಮ್ಮ, ಕರಿಯಪ್ಪ, ರಾಜಪ್ಪ, ಚಂದ್ರಪ್ಪ, ಜಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net