ಉಗ್ರರ ಕೃತ್ಯಕ್ಕೆ ಖಂಡನೆ, ದಿಟ್ಟ ನಿರ್ಧಾರಕ್ಕೆ ಆಗ್ರಹ

30 chn 2
Published on

ಚನ್ನಗಿರಿ: ಕಾಶ್ಮೀರದ ಪಹಲ್ಗಾಮ್ಲ್ಲಿ ಹಿಂದುಗಳ ಮೇಲಿನ ಉಗ್ರರ ದುಷ್ಕೃತ್ಯ ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಪ್ರಧಾನಿ ಮೋದಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಊರಬಾಗಿಲ ಶ್ರೀ ಆಂಜನೇಯ ದೇವಸ್ಥಾನದಿಂದ ಪಾಕಿಸ್ತಾನ್ ಉಗ್ರರ ವಿರುದ್ಧ ಘೊಷಣೆಯನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗಾಂಧಿವೃತ್ತದ ಬಳಿ ಮಾನವ ಸರಪಳಿ ನಿರ್ವಿುಸಿ ತಾಲೂಕು ಕಚೇರಿಗೆ ಬಂದು ತಹಸೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೆ.ಎಚ್. ಮಂಜುನಾಥ್ ಮಾತನಾಡಿ, ಭಾರತದಲ್ಲಿ ಅಹಿಂಸಾ ಪರಮೋಧರ್ಮ ಎಂದು ನಂಬಿ ಜೀವನ ನಡೆಸುವ ಹಿಂದುಗಳ ಮೇಲೆ ಉಗ್ರರು ದಾಳಿ ಮಾಡಿರುವುದು ಅಮಾನವೀಯ. ಮೋದಿಯವರು ಹೆಜ್ಜೆ ಹಿಂದಕ್ಕಿಡದೆ ಉಗ್ರರ ಸಂತತಿಯನ್ನು ಬುಡಸಮೇತ ಕಿತ್ತು ಹಾಕುವ ನಿರ್ಧಾರ ಕೈಗೊಳ್ಳಬೇಕು. ನಿಮ್ಮ ಜತೆ 150 ಕೋಟಿ ಭಾರತೀಯರು ಇದ್ದಾರೆ ಎಂದರು.

ಧರ್ಮ ಕೇಳಿ, ಬಟ್ಟೆಯನ್ನು ಬಿಚ್ಚಿಸಿ ಹಿಂದುಗಳ ಕಗ್ಗೊಲೆ ಮಾಡಲಾಗಿದೆ. ನಡೆದಂತ ಕೃತ್ಯವನ್ನು ವಿಶ್ವವ್ಯಾಪಿ ಖಂಡನೆಯನ್ನು ಮಾಡಿದರು ಪಾಕಿಗಳು ಅದನ್ನು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ಯುದ್ಧ ಬೇಡ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಪ್ರವಾಸಿಗರ ಮೇಲೆ ಕಳ್ಳಹಾದಿಯಲ್ಲಿ ಬಂದ ಉಗ್ರರು ಗುಂಡಿಕ್ಕಿ ಸಾಯಿಸುವುದು ಹೇಡಿತನ. ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಮತ್ತು ಉಗ್ರರ ನಿಮೂಲನೆಯಾಗಬೇಕು ಎಂದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಜಿಲ್ಲಾ ಸಹ ಕಾರ್ಯದರ್ಶಿ ಎನ್. ರವಿಚಂದ್ರ, ಬಿಜೆಪಿ ಅಧ್ಯಕ್ಷ ಕುಮಾರ್, ಕಾಯಿ ಮಂಜಣ್ಣ, ಪಿಎಲ್​ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶ್ ಗಂಗಾಗೊಂಡನಹಳ್ಳಿ, ಬುಳ್ಳಿ ಗಣೇಶ್, ಪುರಸಭೆ ಸದಸ್ಯ ಪಟ್ಲಿ ನಾಗರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net