

ಚನ್ನಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಪಠ್ಯದಂತೆ ಪಠ್ಯೇತರದಲ್ಲೂ ಆಸಕ್ತಿ, ಪಾಲ್ಗೊಳ್ಳುವಿಕೆ ಮುಖ್ಯ ಎಂದು ಇಸ್ರೋ ನಿರ್ದೇಶಕ ಎಚ್.ಎಸ್.ರವಿಕುಮಾರ್ ತಿಳಿಸಿದರು.
ತಾಲೂಕು ಹೊದಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನ್ಯೂಸ್ಫೇಸ್ ಇಂಡಿಯಾ ಹಾಗೂ ಬಾಹ್ಯಾಕಾಶ ಇಲಾಖೆ ಸಹಯೋಗದಲ್ಲಿ ಸಿಆರ್‌ಎಸ್ ಚಟುವಟಿಕೆ ಅನುದಾನದಡಿ ನಿರ್ಮಿಸಲಾದ ಹೈಟೆಕ್ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರದಲ್ಲೂ ಭಾಗವಹಿಸುವಂತೆ ಮಾಡುವುದು ಶಿಕ್ಷಕರು ಜವಾಬ್ದಾರಿ. ಅಲ್ಲದೆ, ಪಾಲಕರು ಮಕ್ಕಳು ಅಂಕ ಪಡೆಯಲೆಂದು ಒತ್ತಡ ಹೇರಬಾರದು. ಆಗ ಅವರು ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಆದ್ದರಿಂದ ಅವರನ್ನು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಮಕ್ಕಳು ಸದಾ ಕ್ರಿಯಾಶೀಲ ಮತ್ತು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕು. ವಾರದಲ್ಲಿ ಒಂದು ದಿನವಾದರೂ ಪುಸ್ತಕ ಮುಕ್ತವಾಗಿ ಆಟದಲ್ಲಿ ತೊಡಗಿಸುವುದು ಉತ್ತಮ ಎಂದರು.
ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಿಗೆ ಸಕಲ ಸೌಕರ್ಯ ಕಲ್ಪಿಸುವ ಜತೆ ಗುಣಮಟ್ಟದ ಶಿಕ್ಷಕರನ್ನು ನೇಮಿಸಿದೆ. ಶಾಲೆಗೆ ಬೆಳಗ್ಗೆ ಬಂದ ಮಕ್ಕಳು ಶಿಕ್ಷಕರೊಂದಿಗೆ ಮಧ್ಯಾಹ್ನದವರೆಗೆ ಇರುತ್ತಾರೆ. ಅವರ ಆಸಕ್ತಿ ಅರಿತು ಅದಕ್ಕೆ ಪ್ರೋತ್ಸಾಹ ನೀಡಿದರೆ ಯಶಸ್ಸು ಕಾಣಲು ಸಾಧ್ಯ ಎಂದರು.
ಬಿಈಒ ಎಲ್.ಜಯಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಸಿ.ಯೋಗರಾಜ್, ಬಿಆರ್‌ಸಿ ಡಾ.ಎಸ್.ಶಂಕರಪ್ಪ, ಸಿಆರ್‌ಪಿ ಬಿ.ವಿ.ಪಾಲಾಕ್ಷಪ್ಪ, ಮುಖ್ಯಶಿಕ್ಷಕ ವಿ.ಹನುಮಂತ, ಎಚ್.ಜಿ.ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಬಿ.ಯೋಗರಾಜ್ ಇದ್ದರು.