

ಚನ್ನಗಿರಿ: ಮಹರ್ಷಿ ವಾಲ್ಮೀಕಿ ವಿಶ್ವಗುರು. ಅವರು ಯಾವ ಧರ್ಮಕ್ಕೂ ಸೇರಿದವರಲ್ಲ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಹಿರೇಮಠದಲ್ಲಿ ಭಾನುವಾರ ಆಯೋಜಿಸಿದ್ದ ಶಿವಾನುಭವ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಪ್ರಾರಂಭದ ಜೀವನದಲ್ಲಿ ಬೇಟೆಗಾರನಾಗಿದ್ದ ರತ್ನಾಕರ, ಸಪ್ತ ಋಷಿಗಳಲ್ಲಿ ಒಬ್ಬರಾದ ನಾರದರಿಂದ ಜ್ಞಾನೋದಯ ಪಡೆದು ವಾಲ್ಮೀಕಿ ಆಗಿ ಬದಲಾದರು. ಅವರು ಬರೆದ ರಾಮಾಯಣ ಗ್ರಂಥದಿಂದ ರಾಮ-ಲಕ್ಷ್ಮಣರ ಚರಿತ್ರೆ ಜಗತ್ತಿಗೆ ತಿಳಿಯಿತು. ಭೂಮಿ ಇರುವವರೆಗೆ ರಾಮನ ಹೆಸರು ಸದಾ ಇರುತ್ತದೆ. ವಾಲ್ಮೀಕಿ ಜಯಂತಿ ಆಚರಿಸಿದರೆ ಸಾಲದು, ಅವರ ಜೀವನಾದರ್ಶಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
2ಎ ಅವರು ಪರಿಶಿಷ್ಟ ಜಾತಿ ಪಟ್ಟಕ್ಕೆ, ನಾಯಕ ಸಮಾಜದವರು ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಎಲ್ಲರಿಗೂ ಆಡಳಿತ ಸರ್ಕಾರ ಅವಶ್ಯಕತೆ ಆಧಾರದ ಮೇಲೆ ಮೀಸಲಾತಿ ನೀಡುವ ಕೆಲಸ ಮಾಡಬೇಕಿದೆ ಎಂದರು.
ಉಪನ್ಯಾಸಕ ಎಚ್.ರುದ್ರೇಶ್ ಮಾತನಾಡಿ, ವಾಲ್ಮೀಕಿಯವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ರಾಮಾಯಣ ಹಿಂದುಗಳ ಪವಿತ್ರ ಗ್ರಂಥ. ಇದರ ಸಾರ ಅರಿತು ಬದುಕು ಕಟ್ಟಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ಎಂದರು.
ಕಸಾಪ ಮಾಜಿ ಅಧ್ಯಕ್ಷ ಒ.ಎಸ್.ನಾಗರಾಜ್, ಪುರಸಭೆ ಮಾಜಿ ಸದಸ್ಯ ಪಿ.ಬಿ.ನಾಯಕ್, ಕುಂಬಾರ ಸಮಾಜದ ಅಧ್ಯಕ್ಷ ಅಜ್ಜಣ್ಣ, ಜ್ಯೋತಿ ಕೋರಿ, ಉಮೇಶ್ ಇದ್ದರು.