

ಚನ್ನಗಿರಿ: ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸಿ ತರಗತಿ ಸುಗಮವಾಗಿ ನಡೆಯುವಂತೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಉಪ ತಹಸೀಲ್ದಾರ್ ಅರುಣ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಆರ್.ಎಂ.ಪುನೀತಕುಮಾರ್ ಮಾತನಾಡಿ, ಕಾಲೇಜಿನಲ್ಲಿ 3000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೇವೆ. ಬಹುತೇಕರು ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದವರಾಗಿದ್ದೇವೆ ಎಂದರು.
ಅನುಕೂಲ ಇದ್ದಿದ್ದರೆ ಖಾಸಗಿ ಕಾಲೇಜಿಗೆ ಸೇರುತ್ತಿದ್ದೆವು. ಆದರೆ ಅರ್ಧ ವರ್ಷ ಕಳೆದರೂ ಸರಿಯಾಗಿ ತರಗತಿಗಳು ನಡೆದಿಲ್ಲ. ಪರೀಕ್ಷೆ ಹತ್ತಿರ ಬರುತ್ತಿವೆ. ಮೊದಲು ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಎಂ.ಅನಂತ, ಪ್ರಶಾಂತ ಗೌಡ್ರು, ಎಚ್.ಎನ್.ಸಂಜಯ್, ಎಸ್.ಎಸ್.ಮಲ್ಲಿಕಾರ್ಜುನ, ಮಹ್ಮದ್ ಮಸ್ತಕ್, ರೂಪಾಬಾಯಿ, ವಿ.ಅಕ್ಷತಾ ಇದ್ದರು.