ಕಿರಾಣಿ ಅಂಗಡಿ ಮೇಲೆ ಅಧಿಕಾರಿಗಳ ದಾಳಿ

chn thasildar 19 edit
ಚನ್ನಗಿರಿಯ ಕಿರಾಣಿ ಅಂಗಡಿ ಮೇಲೆ ಶನಿವಾರ ತಹಸೀಲ್ದಾರ್ ಎನ್.ಜೆ. ನಾಗರಾಜ್ ದಾಳಿ ನಡೆಸಿ ಪರಿಶೀಲಿಸಿದರು.
Published on

ಚನ್ನಗಿರಿ: ದಿನಬಳಕೆ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಪಟ್ಟಣದ ಕಿರಾಣಿ ಅಂಗಡಿ, ಮೂರು ಗೋದಾಮುಗಳ ಮೇಲೆ ತಹಸೀಲ್ದಾರ್ ಎನ್.ಜೆ.ನಾಗರಾಜ್ ಶನಿವಾರ ದಾಳಿ ನಡೆಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನೃಪತುಂಗ ರಸ್ತೆಯ ಸಗಟು ಮಾರಾಟದ ಅಂಗಡಿಯಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಗುಟ್ಕಾ, ಸಿಗರೇಟು ಮಾರಾಟದ ಜತೆಗೆ ದಿನಬಳಕೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.

ಗ್ರಾಹಕರ ದೂರಿನ ಮೇರೆಗೆ ಅಂಗಡಿ ಮೇಲೆ ದಾಳಿ ನಡೆಸಿದಾಗ ಮೂರು ಪಾಕೆಟ್ ಗುಟ್ಕಾ ಸಿಕ್ಕಿದೆ. ಅಂಗಡಿ ಪರವಾನಗಿ ಪಡೆಯದೇ ಇರುವುದು, ಆದಾಯ ತೆರಿಗೆ ಪಾವತಿಸದೇ ಇರುವುದು ಕಂಡು ಬಂದಿದೆ.

ನಿತ್ಯ ಬೆಳಗ್ಗೆ 10ರವರೆಗೆ ವ್ಯಾಪಾರಕ್ಕೆ ಸಮಯ ನಿಗದಿಪಡಿಸಿದ್ದರೂ ಆ ನಂತರವೂ ಹಿಂದಿನ ಬಾಗಿಲಿನಿಂದ ವ್ಯಾಪಾರ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಾಳಿ ವೇಳೆ ತಹಸೀಲ್ದಾರ್ ಎನ್.ಜೆ.ನಾಗರಾಜ್ ಮಾತನಾಡಿ, ಅಂಗಡಿ ಮಾಲೀಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜಸ್ವ ನಿರೀಕ್ಷಕ ವೃಷಭೇಂದ್ರಸ್ವಾಮಿ, ಪುರಸಭೆ ಆರೋಗ್ಯಾಧಿಕಾರಿ ಶಿವರುದ್ರಪ್ಪ, ರವಿಕುಮಾರ್, ತಿಪ್ಪೇಸ್ವಾಮಿ ದಾಳಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net