ಕಸಕಡ್ಡಿ, ಸತ್ತ ಪ್ರಾಣಿಗಳಿಂದ ಹಾಳಾಗುತ್ತಿದೆ ಚನ್ನಗಿರಿ ಪುಟ್ಟಬಸಪ್ಪನ ಕೆರೆ

chn oct 27 manavi
Published on
ಚನ್ನಗಿರಿ: ಪಟ್ಟಣ ವ್ಯಾಪ್ತಿಯ ಪುಟ್ಟಬಸಪ್ಪನ ಕೆರೆಗೆ ಸಾರ್ವಜನಿಕರು ಘನ ತ್ಯಾಜ್ಯಗಳನ್ನು ಮತ್ತು ಸತ್ತ ಪ್ರಾಣಿಗಳನ್ನು ಎಸೆಯುತ್ತಿರುವುದರಿಂದ ಕೆರೆಯ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕೆರೆ ಉಳಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಸೋಮವಾರ ತಹಸೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಕೆ. ಸೈಯದ್ ಜಿಲಾನಿ, "ಸರ್ಕಾರ ಕೋಟಿಗಟ್ಟಲೆ ಅನುದಾನ ನೀಡಿ ಕೆರೆಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತಿದೆ. ಆದರೆ, ಪಟ್ಟಣಕ್ಕೆ ಹೊಂದಿಕೊಂಡಿರುವ ಪುಟ್ಟಬಸಪ್ಪನ ಕೆರೆಗೆ ಗ್ರಾಮಸ್ಥರು ಪ್ರತಿದಿನ ಕಸಕಡ್ಡಿಗಳನ್ನು ಹಾಕಿ ಕೆರೆಯನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೆರೆ ಸುತ್ತಮುತ್ತಲಿನ ಪ್ರದೇಶವನ್ನು ಜನರು ಒತ್ತುವರಿ ಮಾಡಿಕೊಂಡಿದ್ದಾರೆ" ಎಂದು ದೂರಿದರು.

ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ನಿರ್ಲಕ್ಷ್ಯ ತೋರಿದ್ದಲ್ಲಿ ಭವಿಷ್ಯದಲ್ಲಿ ಕೆರೆ ಸಂಪೂರ್ಣವಾಗಿ ಮುಚ್ಚಿ ಹೋಗುತ್ತದೆ ಎಂದು ಎಚ್ಚರಿಸಿದರು.

ಸತ್ತ ಪ್ರಾಣಿಗಳಿಂದ ದುರ್ವಾಸನೆ

ಈ ಸಾಲಿನಲ್ಲಿ ಉತ್ತಮ ಮಳೆಯಾಗಿ ಕೆರೆ ಕೋಡಿ ಬಿದ್ದಿದ್ದರೂ ಸಹ, ಇಲ್ಲಿ ಸತ್ತ ಪ್ರಾಣಿಗಳನ್ನು ತಂದು ಹಾಕುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ. ಶಿವಮೊಗ್ಗ, ದಾವಣಗೆರೆ, ಭದ್ರಾವತಿ ಕಡೆ ಪ್ರಯಾಣಿಸುವವರಿಗೆ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೆರೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಈಗಲಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಕೆರೆ ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

₹80 ಲಕ್ಷ ಅನುದಾನ ನೆನೆಗುದಿಗೆ

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ. ನಾಗರಾಜ್ ಮಾತನಾಡಿ, "ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಈಗಾಗಲೇ ₹80 ಲಕ್ಷ ಮಂಜೂರಾಗಿದ್ದರೂ, ಆ ಅನುದಾನವನ್ನು ಬಳಕೆ ಮಾಡಿಕೊಳ್ಳದೆ ಕೆರೆ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಕೂಡಲೇ ಜಾಗೃತರಾಗಿ ಕೆರೆ ಉಳಿಸುವ ಕೆಲಸ ಮಾಡಬೇಕು" ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಧರಣೇಂದ್ರ, ಜಪ್ರುಲ್ಲಾ, ಉಮದ್ ಮುಕ್ತಾರ್, ಅಬ್ದುಲ್ ಘನಿಸಾಬ್, ಮಹ್ಮದ್ ನವಾಜ್, ಸಮಿವುಲ್ಲಾ ಸೇರಿದಂತೆ ಹಲವು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net