ಮುಷ್ಯಾಗಳ ಹಾವಳಿಗೆ ಜನ ಹೈರಾಣು

chn mangagala havali july 12 (2)
Published on

ಟಿ.ಎನ್. ಜಗದೀಶ್ ಚನ್ನಗಿರಿ
ಪಟ್ಟಣಕ್ಕೆ ಆಹಾರ ಅರಸಿ ಬಂದಿರುವ ಮುಷ್ಯಾಗಳ (ಮಂಗ) ಹಾವಳಿಯಿಂದ ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಓಡಾಡಲು ಭಯಭೀತರಾಗುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪಟ್ಟಣದ ಸಮೀಪದ ಕುಕ್ಕುವಾಡ ಅಭಯಾರಣ್ಯ, ಮಾವಿನಕಟ್ಟೆ ಕಾಡು ಪ್ರದೇಶ, ಜೋಳದಾಳು ಅಮ್ಮನಗುಡ್ಡ ಕುಕ್ಕುವಾಡೇಶ್ವರಿ ದೇವಸ್ಥಾನ, ತಾವರೆಕೆರೆ ಬಳಿ ಚೌಡಮ್ಮನ ದೇವಸ್ಥಾನ, ಗಣಪತಿ ದೇವಸ್ಥಾನ, ರಂಗಯ್ಯನಗಿರಿ ಅರಣ್ಯ ಪ್ರದೇಶಗಳಿವೆ. ಇಲ್ಲಿನ ದೇಗುಲಗಳಿಗೆ ಸಾಮಾನ್ಯ ದಿನಗಳಲ್ಲಿ ವಿವಿಧೆಡೆಯಿಂದ ಬರುತ್ತಿದ್ದ ಜನರು ಕೊಡುತ್ತಿದ್ದ ತಿನಿಸುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕೋತಿಗಳಿಗೆ ಕೆಲ ತಿಂಗಳುಗಳಿಂದ ಆಹಾರವಿಲ್ಲದಾಗಿದೆ. ಲಾಕ್‌ಡೌನ್‌ನಿಂದ ದೇಗುಲಗಳ ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದ್ದು, ಪ್ರವಾಸಿಗರು, ಭಕ್ತರು ಬರುತ್ತಿಲ್ಲ. ಹೀಗಾಗಿ ಆಹಾರ ಅರಸಿ ಪಟ್ಟಣಕ್ಕೆ ಲಗ್ಗೆ ಇಟ್ಟಿವೆ.

ಹಸಿವಿನಿಂದ ಅರಣ್ಯದಂಚಿನ ಗ್ರಾಮ, ಪಟ್ಟಣಗಳಿಗೆ ನುಗ್ಗಿ ಜನರ ಕೈಯಲ್ಲಿರುವ ವಸ್ತುಗಳನ್ನು ಕಿತ್ತು ತಿನ್ನಲಾರಾಂಭಿಸಿವೆ. ಸದಾ ಮನೆ ಮೇಲೆ ಕುಳಿತು, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಒಳಗೆ ಹೋಗಿ ಕೈಗೆ ಸಿಕ್ಕಿದ್ದೆಲ್ಲವನ್ನು ತಿಂದು ಬಿಸಾಡುತ್ತಿವೆ. ಇವುಗಳ ಹಾವಳಿಯಿಂದ ಪ್ರತಿಯೊಬ್ಬರೂ ಕೈಯಲ್ಲಿ ಕೋಲು ಹಿಡಿದು ಓಡಾಡುವಂತಾಗಿದೆ.

ಒಂದು ಕಡೆ ಕರೊನಾ ಕಾಟವಾದರೆ ಇನ್ನೊಂದೆಡೆ ಮಂಗಗಳ ಉಪಟಳಕ್ಕೆ ರೋಸಿರುವ ಪಟ್ಟಣದ ಜನತೆಗೆ ಮನೆಯಿಂದ ಹೊರ ಹೋಗಿ ಹಾಲು ತರುವುದೂ ಕಷ್ಟವಾಗಿದೆ. ಇವುಗಳನ್ನು ಹೆದರಿಸಲೆಂದು ಬಹುತೇಕರು ಪಟಾಕಿ ಖರೀದಿಸಿ ಇಟ್ಟುಕೊಂಡಿದ್ದಾರೆ. ಏನೇ ಮಾಡಿದರೂ ಮುಷ್ಯಾಗಳು ಪಟ್ಟಣ ಬಿಟ್ಟು ಹೋಗುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ತಾಲೂಕು ಆಡಳಿತ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮನೆಯ ಬಾಗಿಲು ತೆರೆಯಲು ಭಯವಾಗುತ್ತದೆ. ಮನೆಯೊಳಗಡೆ ನುಗ್ಗಿದರೆ ಅವುಗಳನ್ನು ಓಡಿಸುವುದು ಸಾಹಸವೇ ಸರಿ. ಮಂಗಗಳ ಹಾವಳಿ ಹೆಚ್ಚಾದ್ದರಿಂದ ಬಾಗಿಲಲ್ಲಿ ಯಾವಾಗಲೂ ಕೋಲಿಟ್ಟುಕೊಂಡು ಕೂರುವಂತಾಗಿದೆ. ಈ ಬಗ್ಗೆ ಅರಣ್ಯಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.
> ಜ್ಯೋತಿಪ್ರಸಾದ್ ಚನ್ನಗಿರಿ

ಚನ್ನಗಿರಿ ಕಾಡಿಗೆ ಹತ್ತಿರವಿದೆ. ಹೀಗಾಗಿ ಇಲ್ಲಿಗೆ ಆಹಾರ ಅರಸಿ ಬರುವ ಮುಷ್ಯಾ, ಕೋತಿಗಳ ಸಂಖ್ಯೆ ಹೆಚ್ಚಿದೆ. ಇವುಗಳಿಂದ ಯಾರಿಗೂ ತೊಂದರೆ ಇಲ್ಲ. ಶೀಘ್ರ ಅವುಗಳನ್ನು ಹಿಡಿದು ಮರಳು ಕಾಡಿಗೆ ಬಿಡಲು ಕ್ರಮ ತೆಗೆದುಕೊಳ್ಳಲಾಗಿದೆ.
> ಬಿ.ಆನಂದ್ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net