ಧೊಂಡಿಯಾ ವಾಘ ಮಹಾನ್ ಸಾಹಸಿಗ

Channagiri, Dondiya Wagha, Commemoration,
Published on

ಹಿರೇಮಠದ ಶ್ರೀ ಕೇದಾರಲಿಂಗ ಅನಿಸಿಕೆ I ಚನ್ನಗಿರಿಯಲ್ಲಿ ಸಂಸ್ಮರಣೆ ಕಾರ್ಯಕ್ರಮ

ಚನ್ನಗಿರಿ: ಮೈಸೂರು ಪ್ರಾಂತ್ಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಧೊಂಡಿಯಾ ವಾಘ ಒಬ್ಬ ಮಹಾನ್ ಸಾಹಸಿಗ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಮರಾಠ ಸಮುದಾಯ ಭವನದಲ್ಲಿ ಮಂಗಳವಾರ ಕನ್ನಡನಾಡು ಹಿತರಕ್ಷಣಾ ಸಮಿತಿ ಹಾಗೂ ಮರಾಠ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಧೊಂಡಿಯ ವಾಘ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 18ನೇ ಶತಮಾನದ ಅಂತ್ಯದ ಸಮಯದಲ್ಲಿ ಮೈಸೂರು ಪ್ರಾಂತ್ಯ ಮತ್ತು ಸುತ್ತಮುತ್ತ ಸೈನಿಕನಾಗಿ ಆಶ್ವದಳದ ನಾಯಕನಾಗಿದ್ದ ಹೋರಾಡಿದ್ದ ಎಂದರು.

ಕೆಳದಿ ಸಂಸ್ಥಾನದಲ್ಲಿ ಕರಣಿಕರ ಸಹಾಯಕರಾಗಿ ವೃತ್ತಿ ಆರಂಭಿಸಿದ ನಂತರ ಮೈಸೂರಿನ ಹೈದರಾಲಿ ಸೈನ್ಯದಲ್ಲಿ ಸೈನಿಕನಾಗಿ ಸೇರಿಕೊಂಡ. ಮೈಸೂರು ಯುದ್ಧದ ಬಳಿಕ ಸೈನ್ಯ ತೊರೆದು ಸ್ವತಂತ್ರವಾಗಿ ಸೈನ್ಯ ಕಟ್ಟಿ ಹರಿಹರ ಮತ್ತಿತರ ಕಡೆ ವಿಜಯ ಸಾಧಿಸಿ, ಪ್ರಭಾವ ವಿಸ್ತರಿಸಲು ಪ್ರಯತ್ನಿಸಿದ ಧೀರ ಎಂದರು.

ಧೀರ ಧೊಂಡಿಯನನ್ನು ಟಿಪ್ಪು ಮತಾಂತರ ಮಾಡಲು ಪ್ರಯತ್ನಿಸಿದಾಗ ಅದಕ್ಕೆ ಜಗ್ಗದೆ ಇರುವ ಕಾರಣ 5 ವರ್ಷ ಜೈಲಿನಲ್ಲಿ ಇರಿಸಿದ. ಶ್ರೀರಂಗಪಟ್ಟಣದಿಂದ ತಪ್ಪಿಕೊಂಡು ಮತ್ತೆ ಪ್ರಭುತ್ವ ಸ್ಥಾಪಿಸಲು ಪ್ರಯತ್ನಿಸಿ ಉಭಯ ಲೋಕಾಧೀಶ್ವರ ಎನಿಸಿಕೊಂಡು ಕೊನೆಗೆ ಬ್ರಿಟಿಷರೊಂದಿಗೆ ಹೋರಾಡಿ, 1800 ಮರಣ ಹೊಂದಿದ ಎಂದರು.

ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ತಿರುಮಲರಾವ್ ಮಾತನಾಡಿ, ಚನ್ನಗಿರಿಯಲ್ಲಿ ಜನಿಸಿದ ಧೊಂಡಿಯ ನಂತರ ಕೆಳದಿ ಹೋಗಿ ಶೌರ್ಯ, ಪರಾಕ್ರಮದ ಮೂಲಕ ದೇಶದಲ್ಲಿ ವೀರನಾಗಿ ಕಾಣಿಸಿಕೊಂಡಿದ್ದಾರೆ. ಅವರ ಜಯಂತಿಯನ್ನು ಎಲ್ಲ ಕಡೆ ಆಚರಿಸುವ ಮೂಲಕ ಅವರ ದೇಶಪ್ರೇಮ ಪಾಲನೆ ಮಾಡಬೇಕಿದೆ ಎಂದರು.

ಕನ್ನಡನಾಡು ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಸರದಾರ್ ಅಹ್ಮದ್, ತಾಲೂಕು ಅಧ್ಯಕ್ಷ ಎಂ. ಅಣ್ಣೋಜಿರಾವ್, ಕ್ಷತ್ರಿಯ ಮರಾಠ ಸಮಾಜ ಗೌರಾಧ್ಯಕ್ಷ ಎಂ.ಎಂ. ಮಂಜುನಾಥ್ ರಾವ್, ಅಧ್ಯಕ್ಷ ಎಂ.ಬಿ. ಶಿವಾಜಿರಾವ್ ಜಾಧವ್, ಕ್ಷತ್ರಿಯ ಮರಾಠ ಪರಿಷತ್ ತಾಲೂಕು ಅಧ್ಯಕ್ಷ ಸತೀಶ್ ಎಂ. ಪವಾರ್, ಕನ್ನಡನಾಡು ಹಿತರಕ್ಷಣಾ ಸಮಿತಿ ನಗರ ಘಟಕದ ಅಧ್ಯಕ್ಷ ನಟರಾಜ್ ರಾಯ್ಕರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಲಿಂಗರಾಜ್, ಚಿನ್ನಸ್ವಾಮಿ, ಡಾ. ಸುಧೀಂದ್ರ ನಾರಾಯಣ ಜೋಯ್ಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net