ಸಂಭ್ರಮದ ಶ್ರೀ ದುರ್ಗಾದೇವಿ ಸಿಡಿ ಉತ್ಸವ

Channagiri, Devi SIDI Utsav,
Published on

ಚನ್ನಗಿರಿ: ತಾಲೂಕಿನ ಬಸವಾಪಟ್ಟಣದ ಶ್ರೀ ದುರ್ಗಾದೇವಿ ಸಿಡಿ ಉತ್ಸವವು ಶುಕ್ರವಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ ಮತ್ತು ವಿಶೇಷ ಪೂಜೆಗಳು ನೆರವೇರಿದವು. ಭಕ್ತರು ಉರುಳು ಸೇವೆ, ದೀರ್ಘದಂಡ ನಮಸ್ಕಾರ ಮತ್ತಿತರ ಸೇವೆ, ಹರಕೆ ಸಲ್ಲಿಸಿದರು.

ಸಂಜೆ ಗೋಧೂಳಿ ಸಮಯ ಪ್ರಾರಂಭವಾಗುತ್ತಿದ್ದಂತೆಯೇ 80 ಅಡಿ ಉದ್ದದ ಸಿಡಿ ಕಂಬದ ವೈಭವದ ಉತ್ಸವಕ್ಕೆ ಭಕ್ತರು ದೇವಿಯ ಜಯಘೋಷಣೆ ಕೂಗಿದರು. ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಸಿಡಿ ಉತ್ಸವದ ಪ್ರಯುಕ್ತ ರೈತಾಪಿ ವರ್ಗದವರು ಎತ್ತಿನಗಾಡಿಯಲ್ಲಿ ಬೆಟ್ಟ ಹತ್ತಿಸಿ ಉತ್ತಮ ಮಳೆ, ಬೆಳೆಗಾಗಿ ದೇವಿಯ ಮೊರೆ ಹೋದರು. ಒಂಟೆತ್ತಿನಲ್ಲಿ ಬೆಲ್ಲದ ಬಂಡಿ ಕಟ್ಟಿ ಬೆಟ್ಟ ಹತ್ತಿಸಿದರು. ವಿವಿಧ ಸಂಘ ಸಂಸ್ಥೆಗಳು ಪಾನಕ, ಮಜ್ಜಿಗೆ ಸೇವೆ ಏರ್ಪಡಿಸಿದ್ದವು.

ಸುತ್ತಲಿನ ಗ್ರಾಮಗಳಿಂದ ಹೊತ್ತು ತಂದ ದೇವರನ್ನು ಸಿಡಿ ಕಂಬದ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಉತ್ಸವ ಮೂರ್ತಿಯೊಂದಿಗೆ ಭಕ್ತರು ಹಲಗೆ ಮೇಳ, ವಾದ್ಯಮೇಳ ಮತ್ತು ಕಲಾ- ಮೇಳಗಳೊಂದಿಗೆ ಹೆಜ್ಜೆ ಹಾಕಿದರು.

ಗ್ರಾಮದ ಪ್ರತಿ ಮನೆಯೂ ಅಲಂಕಾರಗೊಂಡಿದ್ದವು. ಉತ್ಸವಕ್ಕೆ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ತುಮಕೂರು ಮತ್ತಿತರ ಕಡೆಯ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net