ಕೆಲಸ ಮಾಡಿ ಇಲ್ಲವೆ ಜಾಗ ಖಾಲಿ ಮಾಡಿ

Channagiri, Devarahalli Nadakacheri, visit
Published on

ಚನ್ನಗಿರಿ ತಾಲೂಕು ಅಧಿಕಾರಿಗಳಿಗೆ ಶಾಸಕ ಬಸವರಾಜ್ ಶಿವಗಂಗಾ ಎಚ್ಚರಿಕೆ

ಚನ್ನಗಿರಿ: ಜನತೆಗೆ ಸ್ಪಂದಿಸಿ ಕೆಲಸ ಮಾಡಿ -ಆಸಕ್ತಿ ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಶಾಸಕ ಶಿವಗಂಗಾ ಚನ್ನಗಿರಿ ತಾಲೂಕಿನ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಲೂಕಿನ ದೇವರಹಳ್ಳಿ ಗ್ರಾಮದ ನಾಡ ಕಚೇರಿಗೆ ಬುಧವಾರ ಭೇಟಿ ನೀಡಿ, ವಿವಿಧ ವಿಭಾಗಗಳ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದರು.

ಯಾರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲವೋ ಅವರು ನಮ್ಮ ತಾಲೂಕಿಗೆ ಬೇಕಿಲ್ಲ. ಅಂತಹವರು ತಾವಾಗಿ ಹೋದರೆ ಒಳ್ಳೆಯದು. ಇಲ್ಲದಿದ್ದರೆ ನಾನೇ ವರ್ಗಾವಣೆ ಮಾಡಿಸುತ್ತೇನೆ ಎಂದರು,

ಕಚೇರಿಗೆ ಬರುವ ಸಾರ್ವಜನಿಕರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಲು ಈ ಹಿಂದೆಯೇ ತಾಕೀತು ಮಾಡಿದ್ದೇನೆ. ಆದರೂ ಕೆಲವರು ಜನರನ್ನು ಸತಾಯಿಸುತ್ತಿರುವ ದೂರುಗಳಿವೆ ಎಂದು ಕಿಡಿ ಕಾರಿದರು.

ನನ್ನೊಬ್ಬನಿಂದ ಅಭಿವೃದ್ಧಿ ಸಾಧ್ಯವಿಲ್ಲ. ಜವಾನರಿಂದ ಹಿಡಿದು ಮೇಲಧಿಕಾರಿಗಳು ಸೇರಿ ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜನರ‌್ಯಾರೂ ದಡ್ಡರಿಲ್ಲ. ಪ್ರತಿಯೊಬ್ಬರ ಬಳಿ ಮೊಬೈಲ್ ಇದೆ. ಜತೆಗೆ ಕಾನೂನು ತಿಳಿವಳಿಕೆ ಕೂಡ ಇದೆ. ಸಮಯ, ಹಣ ಮೀಸಲಿಟ್ಟು ಕಚೇರಿಗೆ ಬಂದವರಿಗೆ ಕೆಲಸ ಮಾಡಿಕೊಡಿ. ಇಲ್ಲದಿದ್ದರೆ ಕಾನೂನಿನಡಿ ಹಿಂಬರಹ ನೀಡಿ ಕಳುಹಿಸಿ ಎಂದರು.

ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಒಲಿದ ಅವಕಾಶ ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರ ಸೇವೆ ಮಾಡಿದರೆ ನಿಮಗೆ ಮತ್ತು ಕುಟುಂಬಕ್ಕೆ ಒಳಿತಾಗಲಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.

ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಜನರ ಸೇವೆ ಮಾಡಿಕೊಡುವ ಇಚ್ಛಾಶಕ್ತಿ ಇರಬೇಕು. ಹಣದ ಆಸೆ ಇಟ್ಟುಕೊಂಡರೆ ಜನರ ಕೆಂಗಣ್ಣಿಗೆ ಗುರಿಯಾಗಿ ಕೆಲಸ ಕಳೆದುಕೊಂಡು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.

ರಾಜಸ್ವ ನಿರೀಕ್ಷಕ ಪ್ರಸನ್ನಕುಮಾರ್, ಗ್ರಾಮಾಡಳಿತ ಅಧಿಕಾರಿಗಳಾದ ಅನಿತಾ, ರೇಷ್ಮಾ, ವಿಜಯಲಕ್ಷಿ ್ಮ, ಕಂಪ್ಯೂಟರ್ ಅಪರೇಟರ್ ರೇಣುಕಾ, ರುದ್ರೇಶ್, ಮುಖಂಡರಾದ ಮಂಜಪ್ಪ, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net