ಚನ್ನಗಿರಿಗೆ ಉಪ ವಿಭಾಗಾಧಿಕಾರಿ ಕಚೇರಿ ಕೋರಿ ಸರ್ಕಾರಕ್ಕೆ ವಕೀಲರ ಸಂಘ ಮನವಿ

chn feb 03 prathibatane (2)
Published on

ಚನ್ನಗಿರಿ: ಕಂದಾಯ ಉಪ ವಿಭಾಗದ ಕಚೇರಿಯನ್ನು ಹೊನ್ನಾಳಿ ತಾಲೂಕಿಗೆ ಸೇರಿಸಲು ಹೊರಡಿಸಿರುವ ಪ್ರಾಸ್ತಾವಿಕ ಅಧಿಸೂಚನೆ ರದ್ದುಪಡಿಸಿ ಚನ್ನಗಿರಿಯಲ್ಲೇ ಉಳಿಸಬೇಕು ಎಂದು ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಕೋರ್ಟ್ ಕಲಾಪ ಬಹಿಷ್ಕರಿಸಿ ತಾಲೂಕು ಕಚೇರಿ ಮುಂದೆ ಸೋಮವಾರ ನಿರಶನ ನಡೆಸಿದರು.

ಕೋರ್ಟ್ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಕೆ.ಜಿ. ಶಿವಾನಂದ ಮಾತನಾಡಿ, ಸರ್ಕಾರ ಎಲ್ಲ ಪರಿಶೀಲನೆ ನಡೆಸಿ ಚನ್ನಗಿರಿ ತಾಲೂಕಿಗೆ ಎಸಿ ಕಚೇರಿ ಮಂಜೂರು ಮಾಡಿ ಅದೇಶ ಹೊರಡಿಸಿತ್ತು. ಅದರ ಬೆನ್ನೇಲ್ಲೇ ಆದೇಶ ರದ್ದುಪಡಿಸಿ ಹೊನ್ನಾಳಿ ತಾಲೂಕಿಗೆ ಸೇರಿಸಲು ಹೊರಟಿದೆ. ಬಸ್ ಸೌಲಭ್ಯ ಮತ್ತಿತರ ಕಾರಣಗಳಿಂದ ತಾಲೂಕಿನ ಜನರಿಗೆ ಅನ್ಯಾಯವಾಗಲಿದೆ. ಹಿಂದಿನ ಆದೇಶದಂತೆ ಚನ್ನಗಿರಿ ತಾಲೂಕಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಬಿ.ಆರ್. ಮಹೇಂದ್ರಮೂರ್ತಿ, ಸಹ ಕಾರ್ಯದರ್ಶಿ ಜಗದೀಶ್, ಹಿರಿಯ ವಕೀಲ ರುದ್ರಪ್ಪ, ಎಂ.ಎಸ್. ಷಣ್ಮುಖಪ್ಪ, ಎಂ.ಕೆ. ಚಂದ್ರಪ್ಪ, ಎಸ್. ಸುರೇಶ್, ಜಿ. ರವಿ, ಲಕ್ಷ್ಮೀಕಾಂತ, ಜಯಪ್ಪ ಹರೋನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net