ಓಂ ಶಾಂತಿಗೆ ತೆರಳಿದ್ದ ಚನ್ನಗಿರಿಯ ಇಬ್ಬರಿಗೆ ಕೋವಿಡ್

Madalu veerupakshappa 
Published on

ಚನ್ನಗಿರಿ: ತಮಿಳುನಾಡಿನ ಓಂ ಶಾಂತಿ ಕಾರ್ಯಕ್ರಮಕ್ಕೆ ತೆರಳಿದ್ದ ತಾಲೂಕಿನ ಕೆಂಪಯ್ಯನ ತೊಗ್ಗಲು ಗ್ರಾಮದ ಇಬ್ಬರಿಗೆ ಕೋವಿಡ್ ರೂಪಾಂತರಿ ಡೆಲ್ಟಾ ಸೋಂಕು ಹರಡಿದೆ.

ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಈ ಮಾಹಿತಿ ನೀಡಿದ್ದಾರೆ. ತಾಲೂಕು ಆಸ್ಪತ್ರೆಗೆ ಶನಿವಾರ ಅಧಿಕಾರಿಗಳ ಜತೆ ಭೇಟಿ ನೀಡಿ ಪೂರ್ವ ಸಿದ್ಧತೆ ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿ, ಡೆಲ್ಟಾ ಸೋಂಕಿಗೆ ಒಳಗಾದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದರು.

ಓಂ ಶಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 43 ಜನರೂ ಸ್ವ ಗ್ರಾಮಕ್ಕೆ ವಾಪಸಾಗಿದ್ದಾರೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಇಬ್ಬರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್, 70 ಆಕ್ಸಿಜನ್ ಹಾಸಿಗೆ, 67 ಸಿಲಿಂಡರ್ ಸೇರಿ ರೋಗಿಗಳಿಗೆ ಬೇಕಾಗುವ ಔಷಧ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಲಸಿಕೆ ಹಾಕುವಲ್ಲಿ ಚನ್ನಗಿರಿ ತಾಲೂಕು ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ. ಕ್ಷೇತ್ರದ 2.18 ಲಕ್ಷ ಜನರಿಗೆ ಮೊದಲ ಡೋಸ್ ಹಾಕಿ ಶೇ.100ರಷ್ಟು ಪ್ರಗತಿ ಸಾಧಿಸಿದೆ. 1.81 ಸಾವಿರ ಜನರಿಗೆ ಎರಡನೇ ಡೋಸ್ ಹಾಕಿದ್ದು, ಶೇ.84ರಷ್ಟು ಹಾಗೂ 15ರಿಂದ 18 ವರ್ಷದೊಳಗಿನ 7560 ಮಕ್ಕಳಿಗೆ ವ್ಯಾಕ್ಸಿನ್ ಹಾಕಿದ್ದು, ಶೇ.59ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು. ತಹಸೀಲ್ದಾರ್ ಡಾ.ಪಟ್ಟರಾಜಗೌಡ, ತಾಲೂಕು ವೈದ್ಯಾಧಿಕಾರಿ ಡಾ.ಪ್ರಭು ಬಿಸಿಲೇರಿ, ಡಾ.ಪವಿತ್ರಾ, ಡಾ. ಶ್ರೀನಿವಾಸಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net