ಚನ್ನಗಿರಿಯಲ್ಲಿ 10 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್

CHN SANTHEBENNURU 19 edit
ಚನ್ನಗಿರಿ ತಾಲೂಕಿನ ಸಂತೇಬೆನ್ನೂರಲ್ಲಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾಸ್ಕ್ ವಿತರಿಸಿ ಮಾತನಾಡಿದರು. ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ಪ್ರಕಾಶ್ ಇದ್ದಾರೆ.
Published on

ಚನ್ನಗಿರಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕರೊನಾ ತಡೆಗೆ ಸಹಕಾರ ನೀಡಬೇಕೆಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಭಾನುವಾರ ಮೂರು ಲಕ್ಷ ಮಾಸ್ಕ್‌ಗಳನ್ನು ಪ್ರತಿ ಮನೆಗಳಿಗೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರೊನಾ ತಡೆಗಟ್ಟುವ ಸಲುವಾಗಿ ಚನ್ನಗಿರಿ ಪಟ್ಟಣ ಹಾಗೂ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 252 ಗ್ರಾಮಗಳ ಎಲ್ಲ ಕುಟುಂಬಗಳಿಗೆ ಮಾಸ್ಕ್ ವಿತರಿಸಲು ಅನೇಕ ಬಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಜತೆ ಚರ್ಚೆ ಮಾಡಲಾಗಿದೆ. ನನ್ನ ಕ್ಷೇತ್ರದ ಜನರ ಆರೋಗ್ಯ ನನಗೆ ಮುಖ್ಯ. ಜಾತಿ-ಮತ ನೋಡದೇ ಎಲ್ಲರಿಗೂ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಕಡಿಮೆ ಬಂದರೆ ತರಿಸಿಕೊಡುವುದಾಗಿ ಹೇಳಿದರು.

ಕರೊನಾ ಮೂರನೇ ಹಂತ ತಲುಪಿದರೆ ಜನ ಜೀವನ ಕಷ್ಟವಾಗಲಿದೆ. ಇದಕ್ಕೆ ಔಷಧವೂ ಇಲ್ಲ. ಮನೆಯಲ್ಲಿರುವ ಮೂಲಕ ರೋಗ ತಡೆಯಬಹುದಾಗಿದೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಂಡರೂ ಜನರು ಮನೆಯಿಂದ ಹೊರಗೆ ಬರುತ್ತಿದ್ದಾರೆ. ಜನರ ಜೀವಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ತಾಲೂಕಿನ ಅಧಿಕಾರಿಗಳು, ವೈದ್ಯರು, ಮಾಧ್ಯಮದವರು ತಮ್ಮ ಕುಟುಂಬ ಮರೆತು, ರಾತ್ರಿ-ಹಗಲು ಜನರ ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಚನ್ನಗಿರಿ ವಿಧಾನಸಭಾ ಕೇತ್ರ ವ್ಯಾಪ್ತಿಯ 10 ಸಾವಿರ ಕಡು ಬಡ ಕುಟುಂಬಗಳನ್ನು ಗುರುತಿಸಿದ್ದು, ಎಲ್ಲ ಕುಟುಂಬಗಳಿಗೆ ಆಹಾರದ ಕಿಟ್ ಒದಗಿಸಲಾಗುತ್ತದೆ. ಪ್ರತಿ ಮನೆಗೆ ತಾಲೂಕು ಆಡಳಿತದ ಅಧಿಕಾರಿಗಳ ಮೂಲಕ ಮಾಸ್ಕ್ ವಿತರಿಸಲಾಗುತ್ತದೆ ಎಂದರು.

ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಆರ್.ಪ್ರಕಾಶ್, ಸಿಪಿಐ ಆರ್.ಆರ್.ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಪಿಎಸ್‌ಐ ಶಿವರುದ್ರಪ್ಪ ಮೇಟಿ ಇದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net