ಚನ್ನಗಿರಿ ತಾಲೂಕು ಜೋಳದಾಳು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 44 ಜನ ಅಸ್ವಸ್ಥ

301
Published on

ಚನ್ನಗಿರಿ: ತಾಲೂಕು ಜೋಳದಾಳು ಗ್ರಾಮದಲ್ಲಿ ಗುರುವಾರ ಕಲುಷಿತ ನೀರು ಸೇವಿಸಿ 44 ಜನರಿಗೆ ವಾಂತಿ, ಭೇದಿ ಆಗಿ ಆಸ್ಪತ್ರೆ ಸೇರಿದ್ದು, ಶಾಸಕ ಬಸವರಾಜ್ ಶಿವಗಂಗಾ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳಿಗೆ ಸಾಂತ್ವನ ಹೇಳಿದರು.

ಜೋಳದಾಳು ಗ್ರಾಮದಲ್ಲಿ ನಲ್ಲಿ ನೀರು ಸೇವಿಸಿದ ಜನರಲ್ಲಿ ಇಬ್ಬರು ವಾಂತಿ, ಭೇದಿಯಿಂದ ಚನ್ನಗಿರಿ ಆಸ್ಪತ್ರೆಗೆ ದಾಖಲಾದರು. ನಂತರ 15 ಜನರು ಅಸ್ವತ್ಥರಾಗಿ ಆಸ್ಪತ್ರೆ ಸೇರಿದರು. ಶುಕ್ರವಾರವೂ 27 ಜನರು ಬಂದು ದಾಖಲಾಗಿದ್ದಾರೆ.

ಇವರಲ್ಲಿ ಎಂಟು ರೋಗಿಗಳನ್ನು ಶಿವಮೊಗ್ಗ ಮತ್ತು ಭದ್ರಾವತಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ. ಉಳಿದವರನ್ನು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ತಂಡದವರು ಭೇಟಿ ನೀಡಿ, ನೀರು ಸಂಗ್ರಹಿಸಿ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಿದ್ದಾರೆ.

ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿ ಆಗಿತ್ತು. ಯಾರಿಗೂ ತೊಂದರೆ ಆಗಿರಲಿಲ್ಲ. ಈಗ ಅದೇ ರೀತಿ ಜೋಳದಾಳು ಗ್ರಾಮದಲ್ಲಿ ಸಂಭವಿಸಿದೆ. ಇದರಿಂದ ಜನರು ಆತಂಕಗೊಂಡಿದ್ದು, ಜನರು ಆರೋಗ್ಯದತ್ತ ಗಮನ ನೀಡಬೇಕು. ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಬೇಕು. ಆಸ್ಪತ್ರೆಯಲ್ಲಿ ಇರುವಂಥ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡಲು ವೈದ್ಯರಿಗೆ ತಿಳಿಸಲಾಗಿದೆ ಎಂದರು.

ಡಿಎಚ್‌ಒ ಷಣ್ಮುಖಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಡಾ.ಅಮೂಲ್ಯ, ಡಾ.ಹನುಮೇಶ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ಟಿ.ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net