ಶಿಕ್ಷಕರು, ಪಾಲಕರ ಮೇಲಿದೆ ಮಕ್ಕಳ ಪ್ರತಿಭೆ ಗುರುತಿಸುವ ಹೊಣೆ

Channagiri, competition, , award, distribution,
Published on

ಚನ್ನಗಿರಿ: ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರದು ಎಂದು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಾಹಿದ್ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ಹೋಬಳಿ ಸಮೀಪದ ತಣಿಗೆರೆ ಗ್ರಾಮದ ಚೈತನ್ಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಿ ಮಾತನಾಡಿದರು.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ. ನಮಗೆ ಶಕ್ತಿ, ಭಕ್ತಿ ದೊರೆಯಬೇಕೆಂದರೆ ಗುರುವಿನ ಪಾದಕ್ಕೆ ಎರಗಬೇಕು. ತಂದೆ, ತಾಯಿ ಮೊದಲ ಗುರುವಾದರೆ, ಶಿಕ್ಷಕರು ಎರಡನೇ ಗುರು ಎಂದು ತಿಳಿಸಿದರು.

ಗುರುವಿನ ಸ್ಥಾನದಲ್ಲಿ ಗಣಪತಿಯನ್ನು ಪೂಜಿಸುತ್ತೇವೆ. ಆದರೆ, ಗಣಪತಿ ಪಾಠ ಹೇಳಿಕೊಟ್ಟ ಗುರುವನ್ನು ಪೂಜಿಸುತ್ತಾರೆ. ಎಂದರೆ ಗುರುವಿಗೆ ಎಂತಹ ಮಹತ್ವವಿದೆ ಎಂಬುದನ್ನು ಅರಿಯಬೇಕಿದೆ. ಶಿಕ್ಷಕರು ದೇವರು ಎಂಬ ಭಾವನೆ ನಮಗೆ ಇದೆ ಎಂದರು.

ಪ್ರಬಂಧ, ಜಾನಪದ ಗೀತೆ, ಭಾವಗೀತೆ, ಚಿತ್ರಕಲೆ, ಆಶುಭಾಷಣ, ಕವಿತೆ ರಚನೆ ಮತ್ತಿತರ ಚಟುವಟಿಕೆಗಳನ್ನು ನಡೆಸಿ ಅವರ ಪ್ರತಿಭೆಯನ್ನು ಹೊರ ತೆಗೆಯುವ ಕೆಲಸ ಆಗಬೇಕು. ಸಾಹಿತ್ಯ ಹೇಳಿಕೊಟ್ಟರೆ ಜ್ಞಾನ ಮತ್ತು ಭ್ರಾತೃತ್ವ ಭಾವನೆ ಹೆಚ್ಚುತ್ತದೆ ಎಂದರು.

ಸಂಸ್ಥೆ ಅಧ್ಯಕ್ಷೆ ಸವಿತಾ ಪ್ರಕಾಶ್ ಮಾತನಾಡಿ, ಮಕ್ಕಳ ಪರಿಷತ್ ಮುಂದಿನ ದಿನದಲ್ಲಿ ನಡೆಸುವ ಎಲ್ಲ ಕಾರ್ಯಕ್ರಮಗಳಿಗೂ ನಮ್ಮ ಸಹಕಾರ ಇರುತ್ತದೆ. ಮಕ್ಕಳ ಭವಿಷ್ಯ ಕೇವಲ ಅಂಕದಲ್ಲಿ ಇಲ್ಲ. ಜತೆಗೆ ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆ ಅನುಸರಿಸಿದಾಗ ಮಾತ್ರ ಉಜ್ವಲ ಭವಿಷ್ಯ ಕಾಣಲು ಸಾಧ್ಯ ಎಂದರು.

ಪರಿಷತ್ ಕೋಶ ಅಧ್ಯಕ್ಷ ಗೂಡಾಳ್ ಉಜ್ಜನಪ್ಪ, ಅಂಚೆ ಕಚೇರಿಯ ನಿವೃತ್ತ ಅಧಿಕಾರಿ ನಾಗೇಂದ್ರಪ್ಪ, ಹನುಮಂತ ರಾಯಪ್ಪ, ಗಾಯಕ ಸಿದ್ದಪ್ಪ, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net