ಕೆರೆ- ಕಟ್ಟೆಗಳು ತುಂಬಿದರೆ ಅಂತರ್ಜಲ ವೃದ್ಧಿ

Channagiri, Checkdam, Bagina
Published on

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿಕೆ l ಮತ್ತಿಹಳ್ಳ ಚೆಕ್‌ಡ್ಯಾಂಗೆ ಬಾಗಿನ

ಚನ್ನಗಿರಿ: ಚೆಕ್‌ಡ್ಯಾಂ, ಕೆರೆ- ಕಟ್ಟೆಗಳು ತುಂಬಿದರೆ ಅಂರ್ತಜಲ ಮಟ್ಟ ವೃದ್ಧಿಸುತ್ತದೆ. ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಗ್ರಾಮಗಳಲ್ಲಿ ರೈತರು, ಸಾಮಾನ್ಯ ಜನರು ನೆಮ್ಮದಿಯಿಂದ ಇರುತ್ತಾರೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ತಾಲೂಕು ಗಾಣದಕಟ್ಟೆ ಗ್ರಾಮದ ಬಳಿಯ ಮತ್ತಿಹಳ್ಳ ಚೆಕ್‌ಡ್ಯಾಂಗೆ ಸೋಮವಾರ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.

ಜನಪ್ರತಿನಿಧಿಗಳಿಗೆ ಅಧಿಕಾರ ಶಾಶ್ವತವಲ್ಲ. ಅಧಿಕಾರ ಸಿಕ್ಕಾಗ ಮಾಡಿದ ಕೆಲಸಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತವೆ. ಶಾಸಕನಾಗಿದ್ದಾಗ ಅಂತರ್ಜಲ ವೃದ್ಧಿಸುವ ಅವಶ್ಯಕ ಇರುವ ಕಡೆ ಚೆಕ್‌ಡ್ಯಾಂಗಳ ನಿರ್ಮಾಣ ಮಾಡಿಸಿದ್ದೇನೆ. ಮಳೆಬಂದಾಗ ನೀರು ತುಂಬುವುದರಿಂದ ಅಂತರ್ಜಲ ಹೆಚ್ಚಾಗಿ ಸುತ್ತಲಿನ ರೈತರಿಗೆ ಅನೂಕೂಲವಾಗಿದೆ ಎಂದರು.

ಗಾಣದಕಟ್ಟೆ ಗ್ರಾಮದ ಬಳಿ ಹರಿಯುವಂಥ ಮತ್ತಿಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಿಸಲು ಹೋದಾಗ ಅನೇಕ ಸಮಸ್ಯೆಗಳು ಬಂದರೂ ಎಲ್ಲರ ಸಹಕಾರ ಪಡೆದು 6 ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸಿದ್ದರ ಪರಿಣಾಮವಾಗಿ ಸಾವಿರಾರು ಎಕರೆಗೆ ಅಂತರ್ಜಲ ಹೆಚ್ಚಾಗಿದೆ. ಈ ಭಾಗದ ರೈತರು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂದರು.

ತಾಲೂಕಿನಲ್ಲಿ ದೊಡ್ಡದಾದ ಚೆಕ್‌ಡ್ಯಾಂ ಇದಾಗಿದೆ. ಇದರಲ್ಲಿ 0.8 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಸಾರಥಿ, ಮಾವಿನಕಟ್ಟೆ, ಚನ್ನೇಶಪುರ ಗ್ರಾಮಗಳ ಕೆರೆಗಳಿಗೆ ನೀರು ಹರಿಯುತ್ತದೆ. ನನ್ನ ಅಧಿಕಾರ ಅವಧಿಯಲ್ಲಿ ಉಬ್ರಾಣಿ ಏತನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಯೋಜನೆಗೆ ಒಳಪಡುವ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇನೆ. ಸಾಸ್ವೇಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಯೋಜನೆಗೆ 170 ಕೋಟಿ ಹಣ ಸರ್ಕಾರದಿಂದ ಮಂಜೂರು ಮಾಡಿಸಿ ಹೆಚ್ಚುವರಿ ಪೈಪ್‌ಲೈನ್ ಅಳವಡಿಸಲು ಕ್ರಮ ಕೈಗೊಂಡಿದ್ದೆ. ಇರುವಂಥ ಶಾಸಕರು ಈ ಕಾಮಗಾರಿ ಆದಷ್ಟು ಶೀಘ್ರವೇ ಪೂರ್ಣಗೊಳಿಸಿ ಕೆರೆಗಳಿಗೆ ನೀರನ್ನು ಹರಿಸಬೇಕು ಎಂದರು.

ಗ್ರಾಮದ ಮುಖಂಡರಾದ ನಿಂಗಪ್ಪ, ಚಂದ್ರಪ್ಪ, ತುಮ್‌ಕೋಸ್ ನಿರ್ದೇಶಕ ಹರೋನಹಳ್ಳಿ ದೇವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಶಶಿಕುಮಾರ್, ದಿಗ್ಗೇನಹಳ್ಳಿ ಟಿ.ಎನ್.ನಾಗರಾಜ್, ಕಾಂತರಾಜ್, ಬೋಜಣ್ಣ, ರುದ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net