

ಚನ್ನಗಿರಿ: ಹನ್ನೆರಡನೇ ಶತಮಾನ ಸಮ ಸಮಾಜ ಮತ್ತು ಕಾಯಕ ಸಂಸ್ಕೃತಿ ಮೇಲೆ ವಿವೇಕ, ವಿವೇಚನೆ, ಅರಿವು ಮತ್ತು ಅನುಭಾವ ನೀಡಿದೆ. ಕಾಯಕಯೋಗಿ ಬಸವಣ್ಣ ಜನಿಸದೇ ಇದ್ದಿದ್ದರೆ ಸಮಾಜದಲ್ಲಿ ದ್ವೇಷ, ಅಸೂಯೆ ತುಂಬಿರುತ್ತಿತ್ತು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ಆಯೋಜಿಸಿದ್ದ 837ನೇ ಶಿವಾನುಭವ ಮತ್ತು ಹಡಪದ ಅಪ್ಪಣ್ಣ ಸ್ಮರಣೋತ್ಸವ, ವಡೇರಹಳ್ಳಿ ಬೈರೇಶ್ ರಚಿತ ಜೇನುಸವಿ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಜನರಿಗೆ ಆಗುತ್ತಿದ್ದ ಶೋಷಣೆ ಕಂಡು ಪರಿವರ್ತನೆ ತರುವ ಉದ್ದೇಶದಿಂದ ಬಸವಣ್ಣ ಅನುಭವ ಮಂಟಪ ನಿರ್ಮಿಸಿದರು. ಅದರ ಮೂಲಕ ಸಮ ಸಮಾಜ ಕಲ್ಪಿಸಲು ಶ್ರಮಿಸಿದರು ಎಂದರು.
ಹಡಪದ ಅಪ್ಪಣ್ಣ ಹನ್ನೆರಡನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕಾಂತ್ರಿಯ ಹರಿಕಾರರಲ್ಲಿ ಒಬ್ಬರು. ಬಸವಣ್ಣನವರ ಬಾಲ್ಯದ ಒಡನಾಡಿಯಾಗಿ ಎಲ್ಲ ಕೆಲಸಗಳಲ್ಲಿ ಬಲಕೈ ಬಂಟರಾಗಿದ್ದರು. ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಸಂಪತ್ತು ಎಂದು ಹೆಸರಾಗಿದ್ದ ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ವಚನ ಬೆಳಕಿನ ಸಾಹಿತ್ಯವಾಗಿದೆ. 12ನೇ ಶತಮಾನದಲ್ಲಿ ಶರಣರು ವರ್ಗ, ವರ್ಣ, ಜಾತಿ ಲಿಂಗಭೇದ ಮರೆತು ಸಮಾಜದ ಪ್ರಗತಿಗೆ ಸೇವೆ ಸಲ್ಲಿಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರು ಹೋಗಬೇಕಿದೆ ಎಂದರು.
ದಾವಣಗೆರೆ ಜಿಎಂಐಟಿ ಕಾಲೇಜಿನ ಪ್ರಾಧ್ಯಾಪಕ ಡಾ.ಜೆ.ಪ್ರವೀಣ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ಜಿಲ್ಲಾಧ್ಯಕ್ಷ ಎಂ.ಬಿ.ನಾಗರಾಜ್, ಬಸವ ವಿದ್ಯಾಪೀಠ ನಿರ್ದೇಶಕ ಟಿ.ವಿ.ಚಂದ್ರಪ್ಪ, ಧನಂಜಯ ಮುಗಳಿಹಳ್ಳಿ ಇದ್ದರು.