ಚಿರಡೋಣಿ-ದೊಡ್ಡಘಟ್ಟ ಸಂಪರ್ಕ ಕಡಿತ

Channagiri, bridge, transport, disconnection, 
Published on

ಚನ್ನಗಿರಿ: ಚಿರಡೋಣಿಯಿಂದ ದೊಡ್ಡಘಟ್ಟ ಗ್ರಾಮ ಮಾರ್ಗದ ಸೂಳೆಕೆರೆ ಹಳ್ಳದ ಸೇತುವೆ ಸಂಪೂರ್ಣ ಜಲಾವೃತವಾದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೂಳೆಕೆರೆ ಹಳ್ಳ ತುಂಬಿ ಹರಿಯುತ್ತಿದ್ದು, ಬಸವಾಪಟ್ಟಣ, ದಾಗಿನಕಟ್ಟೆ, ಕಂಚುಗಾರನಹಳ್ಳಿ, ನಿಲೋಗಲ್ಲು, ಚಿರಡೋಣಿ, ಕಂಸಾಗರ, ಕಣಿವೆಬಿಳಚಿ ಗ್ರಾಮದ ಜನರು ದಾವಣಗೆರೆಗೆ ಹೋಗಲು ಪರದಾಡುವಂತಾಗಿದೆ. ರೈತರು, ಕೂಲಿ ಕಾರ್ಮಿಕರು ಜಮೀನಿಗೆ ತೆರಳಲು ಸಮಸ್ಯೆಯಾಗಿದೆ. ಈ ಭಾಗದಲ್ಲಿ ಭತ್ತದ ಫಸಲು ನೀರುಪಾಲಾಗಿದೆ.

ತಾಲೂಕಿನ ಗುರುರಾಜಪುರ, ಶ್ರೀನಿವಾಸಪುರ, ಮಾವಿನಕಟ್ಟೆ, ಈರಗನಹಳ್ಳಿ, ಕೋಗಲೂರು, ಕಂಸಾಗರ, ಚಿರಡೋಣಿ, ಬೆಳಲಗೆರೆ, ಚಿಕ್ಕಕುರುಬರಹಳ್ಳಿ, ಕಬ್ಬಳ, ರಾಮಗೊಂಡನಹಳ್ಳಿ ಉಬ್ರಾಣಿ ಹೋಬಳಿ ಜಮ್ಮಾಪುರ ಗ್ರಾಮ ಸೇರಿ ಒಟ್ಟು 25 ಮನೆಗಳು ಕುಸಿದಿವೆ. ಸುಮಾರು 38.20 ಲಕ್ಷ ರೂ.ನಷ್ಟವಾಗಿದೆ. ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುತ್ತದೆ ಎಂದು ತಹಸೀಲ್ದಾರ್ ಡಾ.ಪಟ್ಟರಾಜಗೌಡ ತಿಳಿಸಿದ್ದಾರೆ.

ಉಬ್ರಾಣಿಯಲ್ಲಿ ಅಧಿಕ ಮಳೆ: ಸಂತೇಬೆನ್ನೂರು 9, ಜೋಳದಾಳು 9.2, ಚನ್ನಗಿರಿ 12.2, ಕೆರೆಬಿಳಚಿ 16.6, ತ್ಯಾವಣಗಿ 17.6, ಕತ್ತಲಗೆರೆ 17.9, ದೇವರಹಳ್ಳಿ 18.4, ಬಸವಾಪಟ್ಟಣ 20.6, ಉಬ್ರಾಣಿ 26.4 ಮಿಮೀ ಸೇರಿ ಸರಾಸರಿ 147.9 ಮಿಮೀ.ನಷ್ಟು ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net