ಕೆಲಸದಲ್ಲಿ ಬದ್ಧತೆ ತೋರಿದರೆ ಸಾಧನೆ ಸಾಧ್ಯ

Channagiri, Bhagirath, Jayantyutsava,
Published on

ಚನ್ನಗಿರಿ: ಧೃತಿಗೆಡದೆ ಭಗೀರಥ ಸಂದೇಶ ಪಾಲಿಸಿ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಎ.ಎಸ್. ಬಸವರಾಜ್ ದೇವರಹಳ್ಳಿ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಉಪ್ಪಾರ ಸಮಾಜದ ಸಹಯೋಗದಲ್ಲಿ ಏರ್ಪಡಿಸಿದ್ದ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಶಿವನ ಜಡೆಯಲ್ಲಿ ಇದ್ದ ಗಂಗೆಯನ್ನು ಭೂಮಿಗೆ ತಂದ ಕೀರ್ತಿ ಭಗೀರಥ ಸಮಾಜಕ್ಕೆ ಸಲ್ಲುತ್ತದೆ. ಯಾರಾದರೂ ಕೆಲಸವನ್ನು ಸಂಪೂರ್ಣಗೊಳಿಸಿ ಯಸಶ್ಸು ಕಂಡರೆ ಇಂದಿಗೂ ಭಗೀರಥ ಪ್ರಯತ್ನ ಎಂಬ ನಾಣ್ನುಡಿ ಕಾಣುತ್ತೇವೆ. ಗುರುಭಕ್ತಿ, ತಪೋನಿಷ್ಠೆ ಹಾಗೂ ಏಕಾಗ್ರತೆಯಲ್ಲಿ ಮಹರ್ಷಿ ಎಲ್ಲರಿಗೂ ಆದರ್ಶವಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಯುವಸಮೂಹ ಸಾಗಬೇಕು ಎಂದರು.

ಉಪ್ಪಾರ ಸಮಾಜದವರು ಭಗೀರಥರನ್ನು ತಮ್ಮ ಮೂಲ ಪುರುಷ ಎಂದು ಆರಾಧಿಸುತ್ತಾರೆ. ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕಿದೆ ಎಂದರು.

ಮಕ್ಕಳನ್ನು ಮನೆ ಕೆಲಸಕ್ಕೆ ಹಚ್ಚಬಾರದು. ಅವರ ಜೀವನ ರೂಪಿಸುವ ಶಕ್ತಿ ನಿಮ್ಮಲ್ಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸರ್ಕಾರ ನೀಡುವ ಸೌಲಭ್ಯ ಬಳಸಿಕೊಳ್ಳಬೇಕು. ಸರ್ಕಾರದಿಂದಲೇ ಭಗೀರಥ ಜಯಂತಿ ಆಚರಿಸಿರುವುದು ಸಂತಸ ತಂದಿದೆ ಎಂದರು.

ನಲ್ಲೂರು ಉಪ್ಪಾರ ಸಮಾಜದ ಜಿಲ್ಲಾ ಉಪಾಧ್ಯಕ್ಷ ಆರ್. ಪರಮೇಶ್ ಮಾತನಾಡಿ, ಕೆಲಸದಲ್ಲಿ ಬದ್ಧತೆ ಇಲ್ಲದಿದ್ದರೆ ಸಾಧನೆ ಮಾಡುವುದು ಕಷ್ಟ. ಭಗೀರಥರಂತೆ ಪ್ರಯತ್ನ ಮಾಡಿದರೆ ಗುರಿ ತಲುಪುವುದು ಸುಲಭ ಎಂದರು.

ಗ್ರೇಡ್2 ತಹಸೀಲ್ದಾರ್ ರುಕ್ಮಿಣಿಬಾಯಿ, ಉಪ್ಪಾರ ಸಮಾಜದ ಪ್ರಧಾನ ಕಾರ್ಯದರ್ಶಿ ಎಚ್. ಮಂಜುನಾಥ್, ಎಂಜಿಕೆ ಹನುಮಂತಪ್ಪ, ಎಂಜಿಕೆ ಹನುಮಂತಪ್ಪ, ಸಿ.ಎಚ್. ಶ್ರೀನಿವಾಸ್, ಬುಳ್ಳಿ ನಾಗರಾಜ್, ಬುಳ್ಳಿ ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net