ಆತ್ಮಶುದ್ಧಿ ನಡೆಯಿಂದ ಜೀವನ ಸಾರ್ಥಕ

Channagiri, Bavasatattva, Ceremony,
Published on

ಶ್ರೀ ಡಾ.ಶಿವಾನಂದ ಸ್ವಾಮೀಜಿ ಅಭಿಪ್ರಾಯ I ಚನ್ನಗಿರಿಯಲ್ಲಿ ಬವಸತತ್ವ ಸಮಾರಂಭ

ಚನ್ನಗಿರಿ: ವಿಶ್ವದಲ್ಲಿ ಪ್ರಾಣಿಗಳಿಗೆ ಇರುವ ಬೆಲೆ ಮನುಷ್ಯನಿಗೆ ಇಲ್ಲದಂತಾಗಿದೆ. ಪ್ರಾಣಿ ಸತ್ತರೆ ಮನುಷ್ಯ ಹತ್ತಿರ ಹೋಗಿ ನಿಲ್ಲುತ್ತಾನೆ. ಇವನು ಸತ್ತರೆ ಅವನ ಕುಟುಂಬ, ಬಂಧು ಬಳಗ, ಸ್ನೇಹಿತರು ಹತ್ತಿರ ಹೋಗಲು ಹಿಂಜರಿಯುತ್ತಾರೆ. ಮಾನವ ಜನ್ಮ ಕೊನೆಯದು, ಆತ್ಮವನ್ನು ಪರಿಶುದ್ಧ ಮಾಡಿಕೊಂಡು ನಡೆಯಬೇಕು ಎಂದು ಹಾಸನ ಜಿಲ್ಲೆ ಹಾರನಹಳ್ಳಿ ಶ್ರೀ ಕೋಡಿಮಠ ಮಹಾಸಂಸ್ಥಾನ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಸ್ವಾಮೀಜಿಗಳ ಸಂಸ್ಮರಣೋತ್ಸವ, ಬವಸತತ್ವ ಸಮಾರಂಭ, 25ನೇ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಚಿಂತೆ ಇರುತ್ತದೆ. ಆ ಚಿಂತೆ ಬಿಟ್ಟು ಭಗವಂತ ಸ್ಮರಿಸಬೇಕು. 84 ಲಕ್ಷ ಜೀವಿರಾಶಿಗಳಲ್ಲಿ ಮನುಷ್ಯನಾಗಿ ಜನಿಸುವುದು ಪುಣ್ಯದಿಂದ ಆತ್ಮಕ್ಕೆ ಕೊನೇ ಮತ್ತು ಸಾವಿಲ್ಲ. ಆತ್ಮದ ಜತೆ ದೇಹ ಇದ್ದರೂ ಆತ್ಮದ ಮಾತು ಕೇಳದೇ ಇರುವುದು ವಿಪರ್ಯಾಸ. ಶರೀರ ಒಂದು ವಾಹನವಿದ್ದಂತೆ. ಪಂಚೇಂದ್ರಿಯಗಳು ಚಾಲಕನಂತೆ ಕೆಲಸ ಮಾಡುತ್ತವೆ. ಅದರಲ್ಲಿ ಒಬ್ಬರು ಸರಿಯಾಗಿ ಕೆಲಸ ಮಾಡದಿದ್ದರೆ ವಾಹನ ಅಪಘಾತವಾಗುತ್ತದೆ. ಎಷ್ಟು ಕಾಲ ಎಂಬುದಕ್ಕಿಂತ, ಹೇಗೆ ಬದುಕಿದ್ದರು ಎಂಬುದು ಮುಖ್ಯ ಎಂದರು.

ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆಯಾಗಿದೆ. ಜನರು ರಸ್ತೆ, ನೀರು ಬಿಟ್ಟರೆ ಏನನ್ನು ಕೇಳುವುದಿಲ್ಲ. ಕೆಲವು ರಸ್ತೆಗಳ ಅಭಿವೃದ್ಧಿಗೆ ಸ್ವಂತ ಹಣ ಬಳಸಿದ್ದೇನೆ. ಅವಶ್ಯವಿದ್ದರೆ ಮತ್ತೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಮಹಾಮಾತೆ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯವರ ವಚನಾಮೃತ ಬೋಧನೆ, ಪ್ರವಚನ ಹಾಗೂ ಶ್ರೀ ಶಿವಲಿಂಗೇಶ್ವರ ಸ್ವಾಮಿಯವರ ಸಂಸ್ಮರಣೆ, ಶ್ರೀ ಹಾಲಸ್ವಾಮಿಗಳವರ ಸಂಸ್ಮರಣೆ, ಶ್ರೀ ಶ್ರೀಕಂಠ ಸ್ವಾಮಿಗಳವರ 40ನೇ ವರ್ಷದ ಸಂಸ್ಮರಣೆ, ಶ್ರೀ ಜಯದೇವ ಸ್ವಾಮಿಗಳವರ ಚತುರ್ಥ ಸಂಸ್ಮರಣೆ ಮಾಡಲಾಯಿತು.

ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವಜಯಚಂದ್ರ ಸ್ವಾಮೀಜಿ, ಡಾ. ಪುಟ್ಟರಾಜ ಗವಾಯಿಯವರ ಶಿಷ್ಯರಾದ ಮಹಾಂತೇಶ ಶಾಸ್ತ್ರಿ, ವೀರಶೈವ ಸಮಾಜದ ಗೌರವಾಧ್ಯಕ್ಷ ಎನ್.ಯು. ರಾಜಶೇಖರಯ್ಯ, ಬೆಂಗಳೂರು ಗುರುಶ್ರೀ ಆಸ್ಪತ್ರೆ ಡಾ.ಎಂ.ಬಿ.ಗಂಗಾಧರ್, ಗುತ್ತಿಗೆದಾರ ಎಂ.ಡಿ.ಮಹಾಬಲೇಶ್ವರ, ಕೊಳದಮಠದ ವ್ಯವಸ್ಥಾಪಕ ಟಿ.ಎಸ್.ಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net