ಚನ್ನಬಸವೇಶ್ವರ ಮಹಾ ರಥೋತ್ಸವ ಇಂದು

CHANNABASAVANNA
Published on

ಗಿರೀಶ ಪಾಟೀಲ ಜೊಯಿಡಾ

ಉಳವಿ ಚನ್ನಬಸವೇಶ್ವರ ಮಹಾ ರಥೋತ್ಸವ ಫೆ.10 ರಂದು ಮಧ್ಯಾಹ್ನ 4 ಗಂಟೆಗೆ ಜರುಗಲಿದೆ. ಈ ಕ್ಷಣಕ್ಕಾಗಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಈಗಾಗಲೇ ಸೇರಿದ್ದಾರೆ.

ಮಹಾ ರಥೋತ್ಸವದಲ್ಲಿ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಸೇರುವ ಸಾಧ್ಯತೆ ಇದೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಉಳವಿ ಚನ್ನ ಬಸವೇಶ್ವರ ಟ್ರಸ್ಟ್​ನ ಜತೆ ಸ್ಥಳೀಯ ಗ್ರಾಪಂ ಕೈಜೋಡಿಸಿದೆ. ಕುಡಿಯುವ ನೀರಿಗಾಗಿ ಗ್ರಾಪಂನಿಂದ ಉಳವಿಯಲ್ಲಿ 3500 ಲೀ. ಸಾಮರ್ಥ್ಯದ 8 ಟ್ಯಾಂಕ್​ಗಳನ್ನು ಮಾಡಲಾಗಿದೆ. ಅಲ್ಲದೆ, ಐದು ಟ್ಯಾಂಕರ್​ಗಳನ್ನು ತರಿಸಲಾಗಿದೆ. ವಿದ್ಯುತ್ ಕಡಿತವಾದಲ್ಲಿ ನೀರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ 14 ಕೆವಿ ಸಾಮರ್ಥ್ಯದ ಜನರೇಟರ್ ವ್ಯವಸ್ಥೆ ಮಾಡಲಾಗಿದೆ. 10 ಜನರನ್ನು ಸಮರ್ಪಕ ನೀರಿನ ವ್ಯವಸ್ಥೆಗಾಗಿ ನೇಮಿಸಿಕೊಳ್ಳಲಾಗಿದೆ.

ಅರಣ್ಯ ರಕ್ಷಣೆಗೆ ಕ್ರಮ: ಜಾತ್ರೆಗೆ ಬಯಲು ಸೀಮೆಯಿಂದ ಎತ್ತಿನ ಗಾಡಿಗಳಲ್ಲಿ ಬರುವ ಜನ ಎತ್ತಿನ ಗಾಡಿಗಳಿಗೆ ಬೇಕಾದ ಮರದ ದಿಮ್ಮಿಗಳನ್ನು ಕಡಿಯುತ್ತಿದ್ದರು. ಬೆತ್ತ, ಬಿದಿರು ಕೊಂಡು ಹೋಗುತ್ತಿದ್ದರು ಎಂಬ ದೂರಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತು ಉಳವಿ ಟ್ರಸ್ಟ್ ಸಹಕಾರದಿಂದ ಅರಣ್ಯ ರಕ್ಷಣೆಗೆ ಕ್ರಮ ವಹಿಸಿದೆ. ಅರಣ್ಯ ಇಲಾಖೆಯಿಂದ ಭಕ್ತರಿಗಾಗಿಯೇ ಉರುವಲು ಕಟ್ಟಿಗೆ, ಸರ್ಕಾರಿ ದರದಲ್ಲಿ ಬಿದಿರು, ಬೆತ್ತ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಚಕ್ಕಡಿ ಗಾಡಿಗಳಲ್ಲಿ ಬರುವ ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ವಿಶೇಷ ಚೆಕ್ ಪೋಸ್ಟ್​ಗಳನ್ನು ತೆರೆಯಲಾಗಿದೆ. ಅರಣ್ಯದಲ್ಲಿ ಬೆಂಕಿ ಹಾಕುವುದನ್ನು ನಿಷೇಧಿಸಲಾಗಿದೆ. ಎಲ್ಲ ವಾಹನಗಳಿಗೆ ಅರಣ್ಯ ಇಲಾಖೆ 5 ರೂ. ಪ್ರವೇಶ ಶುಲ್ಕ ಪಡೆಯುತ್ತಿದೆ. ಉಳವಿ ಗ್ರಾಪಂ ಚಕ್ಕಡಿಗಾಡಿ ಬಿಟ್ಟು ದ್ವಿಚಕ್ರ ವಾಹನಕ್ಕೆ 20 ರೂ., ಜೀಪ್, ಕಾರ್, ಟೆಂಪೋ, ಟ್ಯಾಕ್ಟರ್​ಗೆ ತಲಾ 40 ರೂ., ಬಸ್ ಸೇರಿ ಭಾರಿ ವಾಹನಕ್ಕೆ 80 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.

ಪಾದಯಾತ್ರೆಯಲ್ಲಿ ಬಂದರೆ ಪಾವನ: ಚನ್ನಬಸವಣ್ಣನವರಂತೆ ಪಾದಯಾತ್ರೆಯಲ್ಲಿ ಬಂದರೆ ಪಾವನ ಎಂಬ ನಂಬಿಕೆ ಭಕ್ತರದ್ದು. ಇದರಿಂದ ಶ್ರಾವಣ,ಕಾರ್ತಿಕ, ಆಷಾಢ ಮಾಸ, ಮತ್ತು ಉಳವಿಯ ಮಹಾ ರಥೋತ್ಸವಕ್ಕೆ ಸಾವಿರಾರು ಭಕ್ತರು ಪಾದ ಯಾತ್ರೆಯ ಮೂಲಕ ಬರುತ್ತಾರೆ. ಬಸವಣ್ಣನ ಕ್ಷೇತ್ರಕ್ಕೆ ಬಂದರೆ ತಮ್ಮ ಎತ್ತಿನ ಜೋಡಿ ಪಾವನವಾಗುತ್ತದೆ ಎಂಬುದು ನಂಬಿಕೆ. ಇದರಿಂದ ಸ್ವಂತ ವಾಹನವಿದ್ದರೂ ಕುಟುಂಬದ ಜತೆ ಎತ್ತಿನ ಗಾಡಿಯಲ್ಲಿ ಬಂದು ದೇವರ ದರ್ಶನ ಪಡೆಯುವುದು ವಾಡಿಕೆ. ‘ಅಡಕೇಶ್ವರ, ಮಡಕೇಶ್ವರ, ಉಳವಿ ಚನ್ನಬಸವೇಶ್ವರ ಹರ ಹರ ಮಹಾದೇವ’ ಎಂಬ ಜಯ ಘೊಷ ಮೊಳಗಿಸುತ್ತ 500 ಕ್ಕೂ ಅಧಿಕ ಚಕ್ಕಡಿ ಗಾಡಿಗಳು ಈಗಾಗಲೇ ಉಳವಿ ತಲುಪಿವೆ. ಪಶು ಇಲಾಖೆಯಿಂದ ಚಕ್ಕಡಿಗಾಡಿಗಳ ಎತ್ತುಗಳ ಆರೈಕೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಉಳವಿಯಲ್ಲಿ ಪಶು ವೈದ್ಯರನ್ನು ನೇಮಿಸಲಾಗಿದೆ.

ವಚನ ಹೊತ್ತು ಬಂದ ಚನ್ನಬಸವಣ್ಣ: ಬಸವಣ್ಣನವರ ತತ್ತ್ವವನ್ನು ಪ್ರಚುರಪಡಿಸಿದವರು ಚನ್ನಬಸವಣ್ಣ. ಕಲ್ಯಾಣ ರಾಜ್ಯದಲ್ಲಿ 12 ನೇ ಶತಮಾನದಲ್ಲಿ ಚನ್ನಬಸವಣ್ಣನವರ ನೇತೃತ್ವದ ಅನುಭವ ಮಂಟಪ ಅಂತರ ಜಾತಿ ವಿವಾಹದಂತಹ ಕ್ರಾಂತಿಕಾರಿ ಕಾರ್ಯಕ್ರಮಗಳಿಂದ ಪ್ರಸಿದ್ಧವಾಗಿತ್ತು. ಅದನ್ನು ಸಹಿಸದ ಅರಸನ ಬೆಂಬಲಿಗರು ವಚನ ಗ್ರಂಥಗಳನ್ನು ಸುಟ್ಟು ಶರಣರನ್ನು ಹಿಂಸಿಸಲು ಪ್ರಾರಂಭಿಸಿದರು. ಹಾಗಾಗಿ ಚನ್ನಬಸವಣ್ಣನವರು ಸಾಕಷ್ಟು ಶರಣರ ಜತೆ ಕಲ್ಯಾಣ ತೊರೆದು ಉಳವಿ ಕ್ಷೇತ್ರಕ್ಕೆ ಗ್ರಂಥಗಳನ್ನು ಹೊತ್ತು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ. ಕದಂಬ ರಾಜ ಪೆರ್ವಡಿದೇವನಲ್ಲಿ ರಕ್ಷಣೆ ಪಡೆಯುತ್ತಾರೆ. ಇಲ್ಲಿಯೇ ನೆಲೆಸಿ ಕ್ರಿ.ಶ. 1168 ಫೆಬ್ರವರಿಯಲ್ಲಿ ಉಳವಿ ಮಹಾ ಕ್ಷೇತ್ರದಲ್ಲಿ ಲಿಂಗೈಕ್ಯರಾದರು ಎನ್ನುತ್ತದೆ ಇತಿಹಾಸ. ಅಂದಿನಿಂದ ಫೆಬ್ರವರಿ ತಿಂಗಳ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದಂದು ಮಹಾ ರಥೋತ್ಸವ ಪ್ರತಿ ವರ್ಷ ನಡೆಯುತ್ತಿದೆ.

ಉಳವಿ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದ ಹಾಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ,ಉಳಿಯಲು ಸ್ಥಳದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೊಡತಳ್ಳಿಯಿಂದ ಕೂಡ ನೀರು ತಂದು ಪೂರೈಸಲಾಗುತ್ತದೆ.| ಮಂಜುನಾಥ ಮುಖಾಶಿ, ಉಳವಿ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net