ಚನ್ನಬಸವೇಶ್ವರ ರಥೋತ್ಸವ ಅದ್ದೂರಿ

RATHOTHSAVA
ಕುಷ್ಟಗಿ ತಾಲೂಕಿನ ನಿಡಶೇಸಿಯ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಸಂಜೆ ಮಹಾರಥೋತ್ಸವ ಜರುಗಿತು.
Published on

ಕುಷ್ಟಗಿ: ತಾಲೂಕಿನ ನಿಡಶೇಸಿಯ ಶ್ರೀ ಚನ್ನಬಸವೇಶ್ವರ ಮಠದ ಜಾತ್ರಾ ಮಹೋತ್ಸವ ಗುರುವಾರ ಸಂಜೆ ಜರುಗಿದ ಮಹಾ ರಥೋತ್ಸವದೊಂದಿಗೆ ಸಂಪನ್ನಗೊಂಡಿತು. ಗ್ರಾಮ ಸೇರಿದಂತೆ ಸುತ್ತಲಿನ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಬೆಳಗ್ಗೆ ಹರಗುರು ಚರಮೂರ್ತಿ ಸಾನ್ನಿಧ್ಯದಲ್ಲಿ ಪಂಚಾಚಾರ್ಯ ಧ್ವಜಾರೋಹಣ ನೆರವೇರಿತು. ಕರ್ತೃ ಗದ್ದುಗೆಗೆ ಏಕಾದಶಿ ರುದ್ರಾಭಿಷೇಕ, ಕ್ಷೇತ್ರ ಮಾತೆ ಚೌಡೇಶ್ವರಿ ದೇವಿಗೆ ಶೋಡಷೋಪಚಾರ ಪೂಜೆ, ಸಹಸ್ರ ಕುಂಕುಮಾರ್ಚನೆ, ಉಭಯ ದೇವರಿಗೆ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು.

ಪಟ್ಟಣದ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವದಲ್ಲಿ ಸುಮಂಗಲಿಯರು ಕುಂಭ ಹೊತ್ತು ಸಾಗಿದರೆ, ದೊಳ್ಳು ಕುಣಿತ, ಪುರವಂತರ ವೀರಗಾಸೆ ನೃತ್ಯ ಗಮನ ಸೆಳೆಯಿತು. ನಂತರ ಗೋಪುರ ಶಿಖರಕ್ಕೆ ಕಲಸಾರೋಹಣ ನಡೆದು ಮಧ್ಯಾಹ್ನ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 11ಜೋಡಿ ನವಜೀವನಕ್ಕೆ ಕಾಲಿಟ್ಟವು.

ತಾಲೂಕಿನ ವಣಗೇರಿ ಗ್ರಾಮದಿಂದ ತೇರಿನ ಹಗ್ಗದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಸಂಜೆ ಶ್ರೀಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಹಾಗೂ ಕರಿಬಸವ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಿದ ಮಹಾರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಕುಷ್ಟಗಿಯ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಂಗಳೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಜಕಲ್‌ನ ಶಿವಲಿಂಗ ಸ್ವಾಮೀಜಿ, ಚಿಕ್ಕ ಮ್ಯಾಗೇರಿಯ ಡಾ.ಗುರುಶಾಂತವೀರ ಸ್ವಾಮೀಜಿ, ದೋಟಿಹಾಳದ ಚಂದ್ರಶೇಖರ ದೇವರು, ಅಮರನಾಥೇಶ್ವರ ದೇವಸ್ಥಾನದ ಮಹಾಂತ ಸಹದೇವಾನಂದ ಗಿರೀಜಿ ಉಪಸ್ಥಿತರಿದ್ದರು.

ಭೂದಾನಿಗಳಿಗೆ ಸನ್ಮಾನ: ಸರ್ಕಾರಿ ಶಾಲೆಗಳಿಗೆ ಭೂದಾನ ಮಾಡಿದ ಕಾಟಾಪುರದ ಪ್ರಹ್ಲಾದ್ ರಾಜ್ ದೇಸಾಯಿ, ತುಮರಿಕೊಪ್ಪದ ಜಾಹ್ನವಿ ಕುಲಕರ್ಣಿ, ಹಿರೇಬನ್ನಿಗೋಳದ ಬಸಮ್ಮ ಮಾಲಗಿತ್ತಿ, ಎಂ.ಗುಡದೂರಿನ ಸಂಗಮ್ಮ, ಯಲ್ಲಮ್ಮ ಹೂಗಾರ, ನಿಡಶೇಸಿಯ ರುಕ್ಮಿಣಿಬಾಯಿ ಕುಲಕರ್ಣಿ ಹಾಗೂ ಕುಣಕೇರಿಯ ಹುಚ್ಚಮ್ಮರಿಗೆ ಜನಮೆಚ್ಚಿದ ಕಾಯಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net