ಚನ್ನಬಸವಪ್ಪ ಬೆಟ್ಟದೂರು ಅವರ ನೆನಪಿನ ದಿನಾಚರಣೆ ಮತ್ತು ಅಧ್ಯಯನ ಶಿಬಿರ * ರೈತರು ಐಕ್ಯ ಹೋರಾಟಕ್ಕೆ ಮುಂದಾಗಬೇಕು -ಕುಷ್ಟಗಿ

raichur
raichur
Published on

ರಾಯಚೂರು ರೈತರು ಒಗ್ಗಟ್ಟಿನಿಂದ ಹೊಸ ರಾಜಕೀಯ ಶಕ್ತಿಯನ್ನು ನಿರ್ಮಾಣ ಮಾಡಿ, ಐಕ್ಯ ಹೋರಾಟಕ್ಕೆ ಮುಂದಾಗಬೇಕು. ದೇಶದ ರೈತರ ಸಮಸ್ಯೆಗಳನ್ನು ನಿವಾರಿಸಲು ಐಕ್ಯ ಹೋರಾಟದ ಅಗತ್ಯತೆ ಇದೆ. ಆದರಿಂದ ಐಕ್ಯ ಹೋರಾಟಕ್ಕೆ ಮುಂದಾಗಬೇಕು ಎಂದು ಹೈದ್ರಾಬಾದ್ ಕರ್ನಾಟಕ ಜನಾಂದೋಲನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಚನ್ನಬಸವಪ್ಪ ಬೆಟ್ಟದೂರು ಅವರ ನೆನಪಿನ ದಿನಾಚರಣೆ ಮತ್ತು ಅಧ್ಯಯನ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಏಕೀಕರಣದ ಚಳವಳಿ, ವೈಚಾರಿಕ ಬರವಣಿಗೆಗಳ ಜತೆಗೆ ಜಿಲ್ಲೆಯಲ್ಲಿ ರೈತರ ಪಡೆಯನ್ನು ಕಟ್ಟಿ ಬೆಳೆಸಿದ ಪ್ರಭಾವಶಾಲಿ ಶಕ್ತಿಯಾದ ಚನ್ನಬಸವಪ್ಪ ಬೆಟ್ಟದೂರು ಅವರು ಕೇವಲ ಎರಡು ಕೃತಿಗಳನ್ನು ಬರೆದಿದ್ದಾರೆಂದು ಎಲ್ಲರಿಗೂ ಗೊತ್ತಿದೆ, ಆದರೆ ಅವರು ಪ್ರಗತಿಪರ ಚಿಂತನೆಗಳುಳ್ಳ, ಬಸವಪ್ರಭು ಪಾಟೀಲ್ ಬೆಟ್ಟದೂರು, ಅಲ್ಲಮಪ್ರಭು ಪಾಟೀಲ್ ಬೆಟ್ಟದೂರು ಹಾಗೂ ಚಾಮರಸ ಮಾಲೀಪಾಟೀಲ್ ಅಂತಹ ಮೂರು ಶಕ್ತಿಗಳನ್ನೂ ಹಾಗೂ ಹೋರಾಟದ ಮುಂಚೂಣಿಯ ನಾಯಕರನ್ನು ಈ ಭಾಗಕ್ಕೆ ನೀಡಿದ್ದಾರೆ ಎಂದರು.

ತುಂಗಭದ್ರಾ ಹಾಗೂ ನಾರಾಯಣಪುರ ನಾಲೆಗಳು ಈ ಭಾಗದ ರೈತರಿಗೆ ವರವಾಗಿಯೂ ಹಾಗೂ ನಿರ್ವಹಣೆ, ರಾಜಕೀಯ ಪ್ರವೇಶದಿಂದ ಶಾಪವಾಗಿಯೂ ಪರಿಣಮಿಸಿದೆ. ಈ ಶಾಪದಿಂದ ಅನೇಕ ರೈತಾಪಿ ಜನರೂ ಇಂದಿಗೂ ಕಣ್ಣೀರು ಹರಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.

ಕೊನೆಯ ಭಾಗದ ರೈತರಿಗೆ ಕಾರಟಗಿ ಹಾಗೂ ತುರ್ವಿಹಾಳ ಭಾಗದ ರಾಜಕಾರಣಿಗಳಿಂದ ಅನ್ಯಾಯವಾಗುತ್ತಿದೆ. ಕಾರಟಗಿ, ತುರ್ವಿಹಾಳ ಸೇರಿದಂತೆ ಮೇಲ್ಭಾಗದ ರಾಜಕಾರಣಿಗಳ ಬೆಂಬಲದಿಂದ 1000ಕ್ಕೂ ಹೆಚ್ಚಿನ ಅನಧೀಕೃತ ಪಂಪ್ ಸೆಟ್‌ಗಳನ್ನು ಅಳವಡಿಸಲಾಗಿದೆ. 500ಕ್ಕೂ ಹೆಚ್ಚು ಟ್ರಾನ್ಸ್‌ಫಾರಂಗಳನ್ನು ಅಳವಡಿಸಲಾಗಿದೆ ಇದನ್ನು ಪ್ರಶ್ನಿಸಲು ಹೋದ ರೈತ ಹೋರಾಟಗಾರ ಚಾಮರಸ ಮಾಲೀಪಾಟೀಲ್ ಮೇಲೆ ಅವಿವೇಕಿ ರಾಜಕಾರಣಿ ದಡೆಸುಗೂರು, ಬಡಿಗೆಗಳಿಂದ ಹಲ್ಲೆ ನಡೆಸಲು ಮುಂದಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆಗೆ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹವಾಮಾನಕ್ಕೆ ತಕ್ಕಂತೆ ವ್ಯವಸಾಯ ಪದ್ದತಿಯನ್ನು ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಯಿದ್ದು, ಜೊತೆಗೆ ರೈತ ಸಂಘಟನೆಯನ್ನು ಬೆಳೆಸುವ, ಸಂಘಟನಾ ಬಲವನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ ಮಾತನಾಡಿ, ನಮ್ಮ ಜೀವನ ಇರುವವರಗೆ ರೈತರಿಗೆ ಅನ್ಯಾಯವಾಗದಂತೆ ನಾವು ನೋಡಿಕೊಳ್ಳಬೇಕು. ಚನ್ನಬಸವಪ್ಪ ಬೆಟ್ಟದೂರು ಅವರ ಕುಟುಂಬದಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಆ ಕಾಲದಲ್ಲಿ ಸಜ್ಜೆ ಖರೀದಿ ಕೇಂದ್ರಕ್ಕಾಗಿ ಹೋರಾಟ ನಡೆಸಿ, ಪ್ರಥಮವಾಗಿ ರಾಯಚೂರಿನಲ್ಲಿ ಸಜ್ಜೆ ಖರೀದಿ ಕೇಂದ್ರ ಆರಂಭ ಮಾಡುವುದಕ್ಕೆ ಹಾಗೂ 12,000 ಎಕರೆ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಿಕೊಡುವ ಹೋರಾಟದಲ್ಲಿ ಚನ್ನಬಸವಪ್ಪ ಬೆಟ್ಟದೂರು ಅವರ ಪಾತ್ರ

ಪ್ರಮುಖವಾದದ್ದು ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು.

ನಂತರ ತುಂಗಭದ್ರ ಎಡದಂಡೆ, ನಾಲೆ ಮತ್ತು ನಾರಾಯಣಪುರ ಬಲ ಮತ್ತು ಎಡದಂಡೆ ನಾಲೆಯ ಸಮಸ್ಯೆಗಳು ಹಾಗೂ ಪರಿಹಾರದ ಕುರಿತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ವಿಷಯವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ.ವಿ.ಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ, ದೊಡ್ಡಬಸವಗೌಡ ಬಲ್ಲಟಗಿ, ಮಲ್ಲಿಕಾರ್ಜುನ ಸತ್ಯಂಪೇಟ, ಗೋಣಿ ಬಸ್ಸಪ್ಪ, ಮಲ್ಲಣ್ಣ, ಮುದ್ದನಯ್ಯ ಸ್ವಾಮಿ, ಮಹಾಂತೇಶ ಮಡಿವಾಳ ಸೇರಿದಂತೆ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net