

ಮಂಡ್ಯ: ವಿಶ್ವಗುರು ಬಸವಣ್ಣನವರ ಕ್ರಾಂತಿಯ ಶರಣಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅ.21 ಹಾಗೂ 22ರಂದು ಬಸವ ಭಕ್ತರ ಸ್ವಾಭಿಮಾನಿ ಕಲ್ಯಾಣಪರ್ವ-2023 ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಕೂಡಲ ಸಂಗಮದ ಸ್ವಾಭಿಮಾನಿ ಕಲ್ಯಾಣಪರ್ವ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದಸ್ವಾಮೀಜಿ ಹೇಳಿದರು.
ಪ್ರತಿವರ್ಷದಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಭಿಮಾನಿ ಕಲ್ಯಾಣಪರ್ವದಲ್ಲಿ ಪಾಲ್ಗೊಳ್ಳುವ ಮೂಲಕ ಶರಣರ ತತ್ವವನ್ನು ಅರಿತು ಗುರು ಬಸವಣ್ಣ ಅವರ ವಿಚಾರಧಾರೆಗಳನ್ನು ಪಸರಿಸುವ ಕಾಯಕದಲ್ಲಿ ನಿರತರಾಗಬೇಕು. ಮಹಾಮಾನವತಾವಾದಿ, ಲಿಂಗಾಯತ ಧರ್ಮದ ಸಂಸ್ಥಾಪಕ ಧರ್ಮಗುರು ಬಸವಣ್ಣ ಅವರ ಭಕ್ತರೆಲ್ಲರೂ ವರ್ಷಕ್ಕೊಮ್ಮೆ ಸಂಗಮವಾಗುವ ಕಲ್ಯಾಣಪರ್ವ ಕಾರ್ಯಕ್ರಮಕ್ಕೆ ತೆಲಂಗಾಣ, ಕೇರಳ, ಮಹರಾಷ್ಟ್ರ, ತಮಿಳುನಾಡು, ಒರಿಸ್ಸಾ ಸೇರಿದಂತೆ ದೇಶದೆಡೆಯಿಂದ ಆಗಮಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶರಣಬಂಧುಗಳು ಪಾಲ್ಗೊಳ್ಳುವ ಕಲ್ಯಾಣಪರ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಗುವುದು. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದ ದರ್ಶನದಿಂದ ಪ್ರತಿಯೊಬ್ಬರಲ್ಲೂ ಧಾರ್ಮಿಕ, ಸಾಮಾಜಿಕ ಬದಲಾವಣೆಯ ಜತೆಗೆ ಸಮಾನತಾ ಸಮಾಜವನ್ನು ಕಟ್ಟುವ ಸಂಕಲ್ಪ ಸಿದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಲಿಂಗಾನಂದಮಹಾಸ್ವಾಮೀಜಿ ಹಾಗೂ ಮಹಾಜಗದ್ಗುರು ಮಾತೆ ಮಹಾದೇವಿ ಅವರು ಹಾಕಿಕೊಟ್ಟ ಆದರ್ಶಗಳನ್ನು ನಾಡಿನಾದ್ಯಂತ ಪಸರಿಸುವ ಕಾಯಕ ಕಲ್ಯಾಣಪರ್ವದಲ್ಲಿ ನಡೆಯಲಿದೆ. ಆಗಮಿಸುವ ಎಲ್ಲರಿಗೂ ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ನಾಗಮಂಗಲ ಮಲ್ಲಿಕಾರ್ಜುನ್, ಆನವಾಳು ವಿಶ್ವನಾಥ್, ಶಿವಲಿಂಗಯ್ಯ, ತ್ರಿಭುವನ್, ಜೀವನ್, ಗಿರಿಜಮ್ಮ ಇತರರಿದ್ದರು.