

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ಮಟ್ಟದಲ್ಲಿ ಇ-ಸ್ವತ್ತು ಅಭಿಯಾನ ತುರ್ತಾಗಿ ಆರಂಭಗೊಳ್ಳಬೇಕೆಂದು ಶಾಸಕ ಎಸ್.ಎನ್.ಚನ್ನಬಸಪ್ಪ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಾಗರಿಕರ ಆಸ್ತಿಗೆ ಸಂಬಂಧಿಸಿದಂತೆ ಇ-ಸ್ವತ್ತು ಕಾರ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದನ್ನು ವಾರ್ಡ್‌ಮಟ್ಟದಲ್ಲಿ ಅಭಿಯಾನದ ರೂಪದಲ್ಲಿ ಪೂರ್ಣಗೊಳಿಸಿ. ಆಗ ನಾಗರಿಕರಿಗೆ ಸುಲಭವಾಗಿ ಇ-ಸ್ವತ್ತು ಸೌಲಭ್ಯ ದೊರೆಯುತ್ತದೆ ಎಂದರು.
ನಾಗರಿಕರು ಈ ಸೌಲಭ್ಯ ಪಡೆಯಲು ಮುಂದೆ ಬಾರದಿದ್ದರೆ ನೀವುಗಳೇ ಅವರ ಮನೆ ಬಾಗಿಲಿಗೆ ಹೋಗಿ ಸೌಲಭ್ಯ ನೀಡಲು ಮುಂದಾಗಬೇಕು. ನಗರದ ನಾಗರಿಕರಿಗೆ ಸೇವೆ ಒದಗಿಸುವುದು ನಿಮ್ಮ ಕರ್ತವ್ಯ. ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗದಂತೆ, ಅಧಿಕಾರಿಗಳು ನಿಗದಿತ ಕಾಲ ಮಿತಿಯೊಳಗೆ ಕೆಲಸ ಮುಗಿಸುವಂತೆ ಸೂಚನೆ ನೀಡಿದರು.
ಕಚೇರಿ ಮಟ್ಟದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಅಲೆದಾಟ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಮನೆ ಬಾಗಿಲಿಗೆ ತೆರಿಗೆ ಸೌಲಭ್ಯ ಒದಗಿಸುವ ಬಗ್ಗೆ ಗಮನಹರಿಸಬೇಕು. ಬಿ-ಖಾತಾ ನಿರ್ವಹಣೆಯಲ್ಲಿ ಕಂಡುಬರುತ್ತಿರುವ ಅಡಚಣೆಗಳ ಬಗೆಹರಿಸಿ ಸಾರ್ವಜನಿಕರಿಗೆ ಸುಲಭವಾಗಿ ಸೇವೆ ಒದಗಿಸಬೇಕು. ಕಂದಾಯ ಇಲಾಖೆಯ ಕೆಲವೊಂದು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರಿಂದ ಬಂದಿರುವ ದೂರುಗಳು ಬಂದಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಸಲಹೆ ನೀಡಿದರು. ಕಂದಾಯ ವಿಭಾಗದ ಪೂಜಾ, ವಿದ್ಯುತ್ ವಿಭಾಗದ ತೇಜ್‌ಪ್ರಸಾದ್, ಜಲಮಂಡಳಿ ಇಇ ಪುಟ್ಟಯ್ಯ ಉಪಸ್ಥಿತರಿದ್ದರು.